ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಹಲವೆಡೆ ರಾತ್ರಿ ವೇಳೆ ಕಳ್ಳರ ಗ್ಯಾಂಗ್ ಆಕ್ಟೀವ್ ಆಗಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಕಳ್ಳರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜಿಲ್ಲೆಯ ಸುರಪುರ ಪಟ್ಟಣದ ಹಲವೆಡೆ ಈ ಘಟನೆ ನಡೆದಿದೆ. ಪಟ್ಟಣದ ಕುಂಬಾರ ಪೇಟ, ಹಸನಾಪುರ, ಗಾಂಧಿ ವೃತ್ತ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ. ಖದೀಮರು ಒಂದೇ ರಾತ್ರಿಯಲ್ಲಿ ಬರೋಬ್ಬರಿ 7 ಅಂಗಡಿಗಳ ಶೆಟರ್ ಮುರಿದ ದೋಚಿದ್ದಾರೆ. ಖತರ್ನಾಕ್ ಕಳ್ಳರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾರ್, ಕಿರಣಿ ಅಂಗಡಿ ಹಾಗೂ ಮೆಡಿಕಲ್ ಶಾಪ್ ಶೆಟರ್ ಮುರಿದು ಖದೀಮರು ದೋಚಿದ್ದಾರೆ. ಮೂವರ ಗ್ಯಾಂಗ್ ನಿಂದ ಕಳ್ಳತನ ನಡೆದಿದೆ. ಶೆಟರ್ ಮುರಿದು ಒಳಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆದರೆ, ಸ್ಥಳೀಯರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನೇ ಭೇದಿಸಲು ಪೊಲೀಸರಿಗೆ ಆಗಿಲ್ಲ. ಏಳು ಅಂಗಡಿಗಳ್ಳತನ ಪ್ರಕರಣ ಸುರಪುರ ಪೊಲೀಸರು ಭೇದಿಸ್ತಾರಾ? ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಆರು ತಿಂಗಳ ಹಿಂದೆ ದೇವಾಪುರ ಗ್ರಾಮದಲ್ಲಿ ಮನೆಗಳ್ಳತನ ನಡೆದಿತ್ತು. ಮನೆಯಲ್ಲಿಟ್ಟಿದ್ದ 7 ತೊಲ ಬಂಗಾರ ಕಳ್ಳತನವಾಗಿತ್ತು. ಎರಡು ತಿಂಗಳ ಹಿಂದೆ ಗಾಂಧಿ ವೃತ್ತದಲ್ಲಿ ಎಟಿಎಂನಿಂದ ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಗ್ಲಾಸ್ ಒಡೆದು ಕಳ್ಳತನ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾತ್ರ ಖದೀಮರ ಬೇಟೆಯಾಡಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.