ಶಿಮ್ಲಾ: ಉತ್ತರಾಖಂಡದ ಚಮೋಲಿಯಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಿಂದಾಗಿ ಹಿಮದಡಿ ಸಿಲುಕಿರುವ ಗಡಿ ರಸ್ತೆಗಳ ಸಂಘಟನೆಯ (ಬಿಆರ್‌ಒ) 46 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಇನ್ನೂ 9 ಮಂದಿ ಹಿಮದ ಅಡಿಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಹೊರತೆಗೆಯಲಾದ ಎಲ್ಲಾ ಕಾರ್ಮಿಕರಿಗೆ ಮಾನಾದ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನಾ ಗ್ರಾಮ ಮತ್ತು ಮಾನಾ ಪಾಸ್ ನಡುವಿನ ಪ್ರದೇಶದಲ್ಲಿ ಏಳು ಅಡಿಗಳಷ್ಟು ಹಿಮದ ಅಡಿ ಇವರು ಸಿಲುಕಿದ್ದು, 65ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಹಿಮವನ್ನು ತೆರವುಗೊಳಿಸಿ, ಕೆಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ಹವಾಮಾನ ಇಲಾಖೆ ಚಮೋಲಿ ಜಿಲ್ಲೆಯಲ್ಲಿ ಮಳೆ ಮತ್ತು ಹಿಮಪಾತದ ಎಚ್ಚರಿಕೆ ನೀಡಿದೆ. ಡೆಹ್ರಾಡೂನ್, ಉತ್ತರಕಾಶಿ, ರುದ್ರಪ್ರಯಾಗ್, ತೆಹ್ರಿ, ಪೌರಿ, ಪಿಥೋರಗಢ, ಬಾಗೇಶ್ವರ, ಅಲ್ಮೋರಾ, ನೈನಿತಾಲ್ ಮತ್ತು ಚಂಪಾವತ್‌ಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಹಿಮದಡಿಯಲ್ಲಿ ಸಿಲುಕಿರುವ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ 5.30ರಿಂದ 6 ಗಂಟೆಯ ಅವಧಿಯಲ್ಲಿ ಅನಿರೀಕ್ಷಿತ ಹಿಮಪಾತ ಸಂಭವಿಸಿತ್ತು. ಬಿಆರ್‌ಒದ ಇಡೀ ಶಿಬಿರವೇ ಭಾರತ-ಟಿಬೆಟ್ ಗಡಿಯಲ್ಲಿರುವ ಕೊನೆಯ ಹಳ್ಳಿ ಮಾನಾದಲ್ಲಿ ಹಿಮದಡಿ ಹೂತುಹೋಗಿತ್ತು. ತರಬೇತಿ ಪಡೆದ ಐಬೆಕ್ಸ್ ಬ್ರಿಗೇಡ್‌ನ 100ಕ್ಕೂ ಹೆಚ್ಚು ಸಿಬ್ಬಂದಿ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ವಾಯುಪಡೆಯ (ಐಎಎಫ್) ಮಿ -17 ಹೆಲಿಕಾಪ್ಟರ್ಗಳು ಶನಿವಾರ ಬೆಳಗ್ಗೆಯೇ ಮಾನಾಗೆ ತೆರಳಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿವೆ.