2025ರ ಏಷ್ಯಾ ಕಪ್ ಟೂರ್ನಮೆಂಟ್ ಸೆಪ್ಟೆಂಬರ್‌ನಲ್ಲಿ ಟಿ20 ಸ್ವರೂಪದಲ್ಲಿ ನಡೆಯುವ ಸಾಧ್ಯತೆಯಿದೆ. ಈ 17ನೇ ಆವೃತ್ತಿಯ ಏಷ್ಯಾ ಕ್ರಿಕೆಟ್ ಟೂರ್ನಮೆಂಟ್ ತಟಸ್ಥ ಮೈದಾನದಲ್ಲಿ ನಡೆಯಲಿದೆ. ‘ಇಂಡಿಯಾ ಟುಡೆ’ಗೆ ಲಭ್ಯವಾದ ಮಾಹಿತಿಯ ಪ್ರಕಾರ, ಈ ಟೂರ್ನಮೆಂಟ್‌ನ ಆತಿಥೇಯ ರಾಷ್ಟ್ರವಾಗಲು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮುಂಚೂಣಿಯಲ್ಲಿದೆ. ಈ ಟೂರ್ನಮೆಂಟ್ 2026ರ ಟಿ20 ವಿಶ್ವಕಪ್ ಮುನ್ನ ಏಷ್ಯಾದ ತಂಡಗಳಿಗೆ ತಯಾರಿ ಮಾಡಲು ಸಹಾಯ ಮಾಡಲಿದೆ. ಆದರೆ, ಭಾರತ ಹಾಗೂ ಪಾಕಿಸ್ತಾನಕ್ಕೆ ಇದು ತಟಸ್ಥ ತಾಣ ಎಂಬುದು ವಿಶೇಷ
ಭಾರತವು 2025ರ ಏಷ್ಯಾ ಕಪ್‌ಗೆ ಅಧಿಕೃತ ಆತಿಥೇಯ ರಾಷ್ಟ್ರವಾಗಿದ್ದರೂ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಟೂರ್ನಮೆಂಟ್ ಅನ್ನು ಯುಎಇನಲ್ಲಿ ಆಯೋಜಿಸುವ ನಿರ್ಧಾರಕ್ಕೆ ಬರುವ ನಿರೀಕ್ಷೆಯಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಅಡೆತಡೆಯ ಹಿನ್ನೆಲೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಎರಡು ರಾಷ್ಟ್ರಗಳ ನಡುವೆ ನಡೆಯುವ ಪಂದ್ಯಗಳನ್ನು ತಟಸ್ಥ ಮೈದಾನದಲ್ಲಿ ಆಯೋಜಿಸಲು ಒಪ್ಪಂದ ಮಾಡಿದೆ. ಎಸಿಸಿ ಕೂಡಾ ಈ ವ್ಯವಸ್ಥೆಯನ್ನು ಅನುಸರಿಸುವ ಸಾಧ್ಯತೆ ಇದೆ.
ಭಾರತ – ಪಾಕ್ ಪಂದ್ಯಗಳು ತಟಸ್ಥ ಮೈದಾನದಲ್ಲಿ
ಭಾರತವು 2023ರ ಏಷ್ಯಾ ಕಪ್‌ಗೆ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದರಿಂದ, ಈ ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಈ ಹೈಬ್ರಿಡ್ ಮಾದರಿಯ ಪ್ರಕಾರ, ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಯಿತು. ಪಾಕಿಸ್ತಾನ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆತಿಥ್ಯವಹಿಸಿತು.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಮೆಂಟ್ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹಾಳಾಗಿದೆ. ಭಾರತವು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದರಿಂದ, ಐಸಿಸಿ ಹೈಬ್ರಿಡ್ ಮಾದರಿಯನ್ನು ಅನುಮೋದಿಸಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಈ ಮೊದಲು ಈ ಹೈಬ್ರಿಡ್ ಮಾದರಿಗೆ ವಿರೋಧ ವ್ಯಕ್ತಪಡಿಸಿದ್ದರೂ, ಅಂತಿಮವಾಗಿ ದುಬೈನಲ್ಲಿ ಆಡಲು ಒಪ್ಪಿಕೊಂಡಿತ್ತು. ಆದರೆ ಅದಕ್ಕೂ ಮೊದಲು ಒಂದು ಒಪ್ಪಂದ ಮಾಡಿಕೊಂಡಿತು. ಅದರ ಪ್ರಕಾರ ಪಾಕಿಸ್ತಾನ ತಂಡ 2025ರ ಮಹಿಳಾ ಏಕದಿನ ವಿಶ್ವಕಪ್ ಮತ್ತು 2026ರ ಪುರುಷರ ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭೇಟಿ ನೀಡುವುದಿಲ್ಲ. ಹೀಗಾಗಿ ಭಾರತವೂ ತಟಸ್ಥ ಸ್ಥಳಕ್ಕೆ ಯೋಜನೆ ಹಾಕಬೇಕಾಗುತ್ತದೆ.
ಭಾರತ ಏಷ್ಯಾ ಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ
2023ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಭಾರತವು ಒಟ್ಟು 8 ಬಾರಿ ಏಷ್ಯಾ ಕಪ್ ಜಯಿಸಿದೆ, ಇದು ಟೂರ್ನಮೆಂಟ್‌ನ ಇತಿಹಾಸದಲ್ಲಿ ಗರಿಷ್ಠ ಜಯ . ಶ್ರೀಲಂಕಾ 6 ಬಾರಿ ಈ ಪ್ರಶಸ್ತಿ ಗೆದ್ದಿದೆ, ಮತ್ತು ಪಾಕಿಸ್ತಾನ 2 ಬಾರಿ ಜಯಿಸಿದೆ.