ನವದೆಹಲಿ: “ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ” ಭಾರತಕ್ಕೆ ಅಮೆರಿಕ ನೀಡುತ್ತಿರುವ 182 ಕೋಟಿ ರೂ. ಸಹಾಯಧನವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸ್ಥಗಿತಗೊಳಿಸಿದ ಬಳಿಕವೂ, ಅದಕ್ಕೆ ಸಂಬಂಧಿಸಿದ ರಾಜಕೀಯ ಜಟಾಪಟಿ ಇನ್ನೂ ಮುಂದುವರಿದಿದೆ. ಭಾರತಕ್ಕೆ ನೀಡುತ್ತಿದ್ದ ಯುಎಸ್ಎಐಡಿ ಧನಸಹಾಯವನ್ನು ಟ್ರಂಪ್ ಶುಕ್ರವಾರ “ಕಿಕ್ ಬ್ಯಾಕ್ ಯೋಜನೆ” ಎಂದು ಕರೆದಿದ್ದಾರೆ. ಅವರು ಹಾಗೆ ಹೇಳಿದ್ದೇ ತಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿರುವ ಬಿಜೆಪಿ, 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು ವಿದೇಶಿ ಹಸ್ತಕ್ಷೇಪಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿದೆ.
ರಿಪಬ್ಲಿಕನ್ ಗವರ್ನರ್ ಗಳ ಸಮ್ಮೇಳನದಲ್ಲಿ ಮಾತನಾಡಿರುವ ಟ್ರಂಪ್, “ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ 21 ಮಿಲಿಯನ್ ಡಾಲರ್ ಕೊಡಲಾಗುತ್ತಿತ್ತು. ಭಾರತದ ಮತದಾನದ ಬಗ್ಗೆ ನಾವೇಕೆ ಯೋಚಿಸಬೇಕು? ನಮ್ಮಲ್ಲೇ ಸಾಕಷ್ಟು ಸಮಸ್ಯೆಗಳಿವೆ. ಅಲ್ಲದೆ, ಭಾರತದ ಬಳಿ ಬೇಕಾದಷ್ಟು ಹಣವಿದೆ. ಅವರಿಗೆ ನಾವೇಕೆ ಸಹಾಯ ಮಾಡಬೇಕು. ಇದೊಂದು ಕಿಕ್ ಬ್ಯಾಕ್ ಯೋಜನೆಯಾಗಿತ್ತು ಎಂಬುದು ನಿಮಗೆ ತಿಳಿದಿದೆ” ಎಂದು ಹೇಳಿದ್ದರು.
2024 ರಲ್ಲಿ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲೆಂದೇ ಭಾರತಕ್ಕೆ 21 ಮಿಲಿಯನ್ ಡಾಲರ್ ನೀಡಲಾಗಿತ್ತೇ ಎಂದು ಟ್ರಂಪ್ ತನ್ನ ಹಿಂದಿನ ಜೋ ಬೈಡನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಅವರು ಈ ಕಿಕ್ ಬ್ಯಾಕ್ ಆರೋಪವನ್ನೂ ಮಾಡಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸಿಆರ್ ಕೇಶವನ್ ಅವರು 2023ರಲ್ಲಿ ಯುಕೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ, “ಭಾರತದ ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶಿಸುವಂತೆ ಅಂದು ರಾಹುಲ್ “ವಿದೇಶಿ ಶಕ್ತಿಗಳನ್ನು” ಒತ್ತಾಯಿಸಿದ್ದರು. ಭಾರತದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಮತ್ತು ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳು ನಿಭಾಯಿಸಿದ ಅಪಾಯಕಾರಿ ಪಾತ್ರಕ್ಕೆ ಈಗ ಟ್ರಂಪ್ ಹೇಳಿಕೆಯೇ ಸಾಕ್ಷಿ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿದ್ದಾಗ ಲಂಡನ್ ನಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೂ, ಟ್ರಂಪ್ ಆರೋಪಕ್ಕೆ ಪರಸ್ಪರ ಸಂಬಂಧವಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು ” ಎಂದು ಹೇಳಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಕಾಂಗ್ರೆಸ್ ವಿರುದ್ಧ ಇಂಥದ್ದೇ ಆರೋಪ ಮಾಡಿದ್ದರು.
ವೆಚ್ಚ ಕಡಿತದ ಭಾಗವಾಗಿ ಅಮೆರಿಕ ದಕ್ಷತಾ ಇಲಾಖೆಯ ಉಸ್ತುವಾರಿ ಹೊತ್ತಿರುವ ಎಲಾನ್ ಮಸ್ಕ್ ಅವರು ಇತ್ತೀಚೆಗೆ ಬೇರೆ ದೇಶಗಳಿಗೆ ಅಮೆರಿಕ ನೀಡುತ್ತಿರುವ ನೆರವನ್ನು ಸ್ಥಗಿತಗೊಳಿಸಿದ್ದರು. ಆ ಪಟ್ಟಿಯಲ್ಲಿ ಭಾರತದ ಹೆಸರೂ ಇತ್ತು. ಭಾರತದಲ್ಲಿ ಚುನಾವಣೆ ವೇಳೆ ಮತದಾನ ಪ್ರಮಾಣ ಹೆಚ್ಚಿಸಲು 182 ಕೋಟಿ ರೂ. ಆರ್ಥಿಕ ನೆರವು ನೀಡಲಾಗುತ್ತಿತ್ತು ಎಂಬುದನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ್ದ ಬಿಜೆಪಿ, ಈ 182 ಕೋಟಿ ರೂ. ನಮಗಂತೂ ಬಂದಿಲ್ಲ. ಹಾಗಿದ್ದರೆ ಈ ಮೊತ್ತ ಎಲ್ಲಿಗೆ ಹೋಗುತ್ತಿತ್ತು ಎಂದು ಪ್ರಶ್ನಿಸಿತ್ತು. ತದನಂತರ ಈ ವಿಚಾರವು ಎರಡೂ ರಾಜಕೀಯ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.