ವಾಷಿಂಗ್ಟನ್: ಒಂದು ಕಡೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಟ್ರಂಪ್‌ರಿಂದ ಶ್ವೇತಭವನದಲ್ಲಿ ಅದ್ಧೂರಿ ಸ್ವಾಗತ ಹಾಗೂ “ತಾರೀಫ್”(ಹೊಗಳಿಕೆ)ಗಳ ಸುರಿಮಳೆ ಸಿಕ್ಕಿದ್ದರೆ, ಮತ್ತೊಂದು ಕಡೆ ಇದೇ ಟ್ರಂಪ್ ಭಾರತಕ್ಕೆ “ಟ್ಯಾರಿಫ್”(ಸುಂಕ)ನ ಬಿಸಿಯನ್ನೂ ಮುಟ್ಟಿಸಿದ್ದಾರೆ.
ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ಆರಂಭಿಸುವುದಕ್ಕೆ ಕೆಲವೇ ನಿಮಿಷಗಳಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರೆಸಿಪ್ರೋಕಲ್ ಟ್ಯಾರಿಫ್(ಪರಸ್ಪರ ತೆರಿಗೆ) ಘೋಷಿಸಿದ್ದಾರೆ. ಅಂದರೆ ಅಮೆರಿಕದ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಎಲ್ಲ ದೇಶಗಳಿಗೂ, ಅಮೆರಿಕ ಬದಲಿ ತೆರಿಗೆ ವಿಧಿಸುವುದಾಗಿ ಅವರು ಹೇಳಿದ್ದಾರೆ. ಈ “ಪ್ರತಿ ತೆರಿಗೆ”ಯಿಂದ ಯಾರಿಗೂ (ಭಾರತವೂ ಸೇರಿ) ವಿನಾಯ್ತಿ ನೀಡಲಾಗದು ಎಂದೂ ಅವರು ಘೋಷಿಸಿದ್ದಾರೆ. ಜೊತೆಗೆ ಅಮೆರಿಕದ ಸರಕುಗಳಿಗೆ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಟಾಪ್ ಸ್ಥಾನದಲ್ಲಿದೆ ಎಂದೂ ಹೇಳಿದ್ದಾರೆ.
ಜಂಟಿ ಸುದ್ದಿಗೋಷ್ಠಿ ವೇಳೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಕ್ಕದಲ್ಲೇ ನಿಂತಿರುವಂತೆಯೇ ಟ್ರಂಪ್, “ಭಾರತ ನಮ್ಮ ಮೇಲೆ ಎಷ್ಟು ಸುಂಕ ವಿಧಿಸುತ್ತದೋ, ನಾವೂ ಅಷ್ಟೇ ತೆರಿಗೆ ವಿಧಿಸುತ್ತೇವೆ” ಎಂದಿದ್ದಾರೆ.
ಯಾವುದರ ಮೇಲೆ ಪರಿಣಾಮ?
ಟ್ರಂಪ್ ಘೋಷಣೆಯಿಂದಾಗಿ ಭಾರತದ ಜವಳಿ ಉತ್ಪನ್ನಗಳು, ಫಾರ್ಮಾಸ್ಯುಟಿಕಲ್ ಉತ್ಪನ್ನಗಳು ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಭಾರತವು ಇಂತಹ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಕ್ಕೆ ರಫ್ತು ಮಾಡುತ್ತಿದೆ. ಇದಕ್ಕೆ ಅಮೆರಿಕ ಹೆಚ್ಚಿನ ಸುಂಕ ಹಾಕಿದರೆ ಈ ಕ್ಷೇತ್ರಗಳಿಗೆ ಹಾನಿ ಉಂಟಾಗಲಿದೆ. ಸದ್ಯಕ್ಕೆ ಈ ಬದಲಿ ತೆರಿಗೆ ಕಾರ್ಯಾದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಇದು ಜಾರಿಗೊಳ್ಳಲು ಇನ್ನೂ ಕೆಲಸ ಸಮಯ ಹಿಡಿಯಲಿದೆ. ಮೂಲಗಳ ಪ್ರಕಾರ, ಏಪ್ರಿಲ್ 2ರಿಂದ ಇದು ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.