ನವದೆಹಲಿ: ಫೆ.19 ರಿಂದ ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಭಾರತ ತನ್ನ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಆದರೆ, ಇತ್ತೀಚಿನ ಬೆಳವಣಿಗೆಯೊಂದನ್ನು ಗಮನಿಸಿದರೆ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ ಇದೆ.
ಕಳೆದ ವಾರ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ(Varun Chakravarthy) ಈಗಾಗಲೇ ಪ್ರಕಟಗೊಂಡಿರುವ ತಂಡಕ್ಕೆ ಸೇರ್ಪಡೆಯಾಗುವ ಲಕ್ಷಣಗಳಿವೆ. ಯಾಕೆಂದರೆ ಸರಣಿಯಲ್ಲಿ ಅವರ ಪ್ರದರ್ಶನ ಆ ಮಟ್ಟಕ್ಕಿತ್ತು.
ಗುರುವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವರುಣ್ ಚಕ್ರವರ್ತಿಗೆ ಅವಕಾಶ ಕೊಟ್ಟಿಲ್ಲ. ಆದರೆ, ಚುಟುಕು ಸರಣಿ ಮುಗಿದ ಬಳಿಕವೂ ಅವರು ತರಬೇತಿ ಮುಂದುವರಿಸಿದ್ದಾರೆ. ಇದು ವರುಣ್ ಅವರನ್ನು ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಸೇರ್ಪಡೆಗೊಳಿಸುವ ತಂತ್ರ ಎನ್ನಲಾಗಿದೆ.
ಯಾರಿಗೆ ಅವಕಾಶ ನಷ್ಟ?
ವರುಣ್ ಚಕ್ರವರ್ತಿ ತಂಡಕ್ಕೆ ಸೇರ್ಪಡೆಯಾಗುವುದಾದರೆ ತಂಡದಲ್ಲಿ ಜಾಗ ಬಿಟ್ಟುಕೊಡುವವರು ಯಾರು ಎಂಬುದು ಸದ್ಯದ ಕುತೂಹಲ. ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯಲ್ಲಿ ಚಕ್ರವರ್ತಿ ಒಟ್ಟು 14 ವಿಕೆಟ್ ಕಿತ್ತು ಮಿಂಚಿದ್ದರು. ಒಂದು ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದ ಜಸ್‌ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಆಡುವುದು ಇನ್ನೂ ಖಚಿತಗೊಂಡಿಲ್ಲ. ಸದ್ಯ ಅವರು ಫಿಟ್ನೆಸ್ ಪರಿಶೀಲನೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(ಎನ್‌ಸಿಎ) ಆಗಮಿಸಿದ್ದಾರೆ. ಆದರೂ ವೇಗದ ಬೌಲರ್‌ಗೆ ಸ್ಪಿನ್ ಬೌಲರ್ ಪರ್ಯಾಯ ಆಗುವುದಿಲ್ಲ.
ಬುಮ್ರಾ ಭವಿಷ್ಯ ಅತಂತ್ರ
31 ವರ್ಷದ ಬುಮ್ರಾ ಫಿಟ್ನೆಸ್ ಪರೀಕ್ಷೆ ಬಳಿಕ ತಂಡಕ್ಕೆ ಮರಳುವ ಸಾಧ್ಯತೆಗಳಿವೆ., ಎನ್‌ಸಿಎ ವೈದ್ಯಕೀಯ ತಂಡ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿಗೆ ತನ್ನ ವರದಿ ನೀಡಲಿದೆ. ಆ ಬಳಿಕ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ಅಧಿಕೃತ ಮಾಹಿತಿ ನೀಡಲಿದೆ. ಜಸ್‌ಪ್ರೀತ್ ಬುಮ್ರಾ ಅಲಭ್ಯರಾದರೆ ಹರ್ಷಿತ್ ರಾಣಾ ಅವರು ಬುಮ್ರಾ ಸ್ಥಾನ ತುಂಬುವ ನಿರೀಕ್ಷೆ ಇದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ.