ಮಂಡ್ಯ: ಮೈಕ್ರೋ ಫೈನಾನ್ಸ್ ಗಳ (Microfinance) ಹಾವಳಿ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯ (CM Siddaramaiah) ಸುಗ್ರೀವಾಜ್ಞೆ ಮೂಲಕ ಹೊಸ ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಮತ್ತೊಂದು ಅನಾಹುತ ನಡೆದಿದೆ.
ಇತ್ತೀಚೆಗಷ್ಟೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ಕೇಳಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು 4 ದಿನಗಳ ಹಿಂದೆ ಪ್ರೇಮಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಯಿಯನ್ನು ಕಳೆದುಕೊಂಡು ಮನನೊಂದ ಪುತ್ರ ರಂಜಿತ್(30) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಯಿ ಮಗನ ಸಾವಿನಿಂದಾಗಿ ಇಡೀ ಕುಟುಂಬ ಬೀದಿಗೆ ಬಂದಂತಾಗಿದೆ. ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ನವರು ಕಾರಣ. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂ. ಹಣ ಕಟ್ಟಿದ್ದಾರೆ. ಆದರೆ, ಬ್ಯಾಂಕ್ ನವರು ಕಟ್ಟಿರುವ ಹಣವನ್ನು ಬಡ್ಡಿಗೆ ಜಮಾ ಮಾಡಿಕೊಂಡಿದ್ದಾರೆ. ಮತ್ತೆ 6 ಲಕ್ಷ ರೂ. ಕಟ್ಟುವಂತೆ ಹಿಂಸೆ ನೀಡುತ್ತಿದ್ದರು. ಹೀಗಾಗಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಪ್ರೇಮಾ ಮಗಳು ಮಾಣಿಕ್ಯ ಆರೋಪಿಸಿ, ಕಣ್ಣೀರು ಸುರಿಸಿದ್ದಾರೆ.