ನವದೆಹಲಿ: ಭಾರತ ತಂಡೆದ ಹಿರಿಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಶನಿವಾರ ನಿವೃತ್ತಿ ಘೋಷಿಸಿದ್ದಾರೆ. 2024-25ರ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡುತ್ತಿರುವ ಅವರು ತಮ್ಮ ಕೊನೆಯ ಲೀಗ್ ಪಂದ್ಯ ಮುಗಿದ ಬಳಿಕ ವಿದಾಯ ಘೋಷಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಪತ್ರದ ಮೂಲಕ ವೃದ್ದಿಮಾನ್ ಸಾಹ ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ವೃದ್ದಿಮಾನ್ ಸಾಹ ತಮ್ಮ 28 ವರ್ಷಗಳ ವೃತ್ತಿಜೀವನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ದೇಶ, ರಾಜ್ಯ, ಜಿಲ್ಲೆ, ಕ್ಲಬ್‌ಗಳು, ವಿಶ್ವವಿದ್ಯಾಲಯ, ಕಾಲೇಜು ಮತ್ತು ಶಾಲೆಯನ್ನು ಪ್ರತಿನಿಧಿಸುವುದು ತಮ್ಮ ಜೀವನದ ಅತ್ಯಂತ ದೊಡ್ಡ ಗೌರವ ಎಂದು ಹೇಳಿದ್ದಾರೆ.
ಭಾರತ ತಂಡದ ಪರ ವೃದ್ದಿಮಾನ್ 40 ಟೆಸ್ಟ್ ಪಂದ್ಯಗಳನ್ನು ಆಡಿ 1353 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಶ್ರೇಷ್ಢ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಸಾಧಾರಣ ವಿಕೆಟ್ ಕೀಪರ್ ಕೌಶಲದ ಹೊರತಾಗಿಯೂ ಎಂಎಸ್ ಧೋನಿ ರೀತಿಯ ಕೌಶಲದ ಕೊರತೆಯಿಂದಾಗಿ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಆಡಲು ಸಾಧ್ಯವಾಗಿರಲಿಲ್ಲ.
ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವೃದ್ದಿಮಾನ್ ರೆಡ್ ಬಾಲ್ ತಂಡಕ್ಕೆ ಬಂದರೂ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ರಿಷಭ್ ಪಂತ್ ಭಾರತ ತಂಡಕ್ಕೆ ಮರಳಿದ ಬಳಿಕ ಸಾಹಗೆ ಅವಕಾಶ ಸಿಗಲಿಲ್ಲ.
2014ರ ಐಪಿಎಲ್‌ನಲ್ಲಿ ಶತಕ ಸಿಡಿಸಿದ್ದ ಸಹಾ
ವೃದ್ದಿಮಾನ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಶತಕ ಸಿಡಿಸಿದ್ದು ಸಾಹ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣ. ಕಳೆದ ಐಪಿಎಲ್ ಟೂರ್ನಿಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದರು. ಅವರು 2023ರ ಟೂರ್ನಿಯಲ್ಲಿ 371 ರನ್‌ಗಳನ್ನು ಕಲೆ ಹಾಕಿದ್ದರು.
ಭಾವನಾತ್ಮಕ ಪತ್ರ
1997ರಲ್ಲಿ ನಾನು ಮೊದಲ ಬಾರಿ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟು ಇಂದಿಗೆ 28 ವರ್ಷಗಳಾಗಿವೆ ಮತ್ತು ಇದು ಅದ್ಭುತ ಪ್ರಯಾಣ. ಇಂದು ನಾನು ಹೊಂದಿರುವ ಪ್ರತಿಯೊಂದು ಸಾಧನೆ, ಕಲಿತ ಪ್ರತಿಯೊಂದು ಪಾಠ-ಇವೆಲ್ಲವುಗಳಿಗೂ ನಾನು ಈ ಅದ್ಭುತ ಆಟಕ್ಕೆ ಋಣಿ.
ಕ್ರಿಕೆಟ್ ನನಗೆ ಅಪಾರ ಸಂತೋಷದ ಕ್ಷಣಗಳು, ಮರೆಯಲಾಗದ ವಿಜಯಗಳು ಮತ್ತು ಅಮೂಲ್ಯ ಅನುಭವಗಳನ್ನು ನೀಡಿದೆ. ಇದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ. ಏರಿಳಿತಗಳು, ವಿಜಯಗಳು ಮತ್ತು ಹಿನ್ನಡೆಗಳ ಮೂಲಕ ಈ ಪ್ರಯಾಣವು ನನ್ನನು ನಾನಾಗಿ ರೂಪಿಸಿದೆ. ಆದರೆ ಇವೆಲ್ಲವೂ ಒಂದಲ್ಲ ಒಂದು ಕೊನೆಯಾಗಬೇಕಾಗಿದೆ. ಆದ್ದರಿಂದ ಇದೀಗ ನಾನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಸುದೀರ್ಘ ಪತ್ರದಲ್ಲಿ ಬರೆದಿದ್ದಾರೆ.