ವಾಷಿಂಗ್ಟನ್: ಅಮೆರಿಕದ(Americe) ಶ್ವೇತಭವನದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಪ್ರಯಾಣಿಕರ ಜೆಟ್‌ವೊಂದು ಅಮೆರಿಕ ಸೇನೆಯ ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್‌ಗೆ(Blackhawk helicopter) ಡಿಕ್ಕಿ ಹೊಡೆದಿದೆ. ಆಗಸದಲ್ಲೇ ನಡೆದ ಈ ಅವಘಡದಲ್ಲಿ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಭೀತಿಯಿದೆ.
ಅಮೆರಿಕನ್ ಏರ್‌ಲೈನ್‌ಗೆ ಸೇರಿದ ವಿಮಾನದಲ್ಲಿ 64 ಮಂದಿ ಪ್ರಯಾಣಿಸುತ್ತಿದ್ದರು. ಇದು ಯುಎಸ್ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಎರಡೂ ಆಗಸದಲ್ಲೇ ಸ್ಫೋಟಗೊಂಡು ಪೊಟೊಮ್ಯಾಕ್ ನದಿಗೆ ಬಿದ್ದಿವೆ. ತತ್ ಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು 19 ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.
ಕಾನ್ಸಾಸ್‌ನ ವಿಚಿತಾದಿಂದ ವಾಷಿಂಗ್ಟನ್‌ಗೆ ತೆರಳುತ್ತಿದ್ದ ಪ್ರಯಾಣಿಕ ಜೆಟ್‌ನಲ್ಲಿ 60 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ. ಈ ವಿಮಾನವನ್ನು ಪಿಎಸ್ಎ ಏರ್‌ಲೈನ್ಸ್ ನಿರ್ವಹಿಸುತ್ತಿತ್ತು.
ಘಟನೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಹೊರಡಬೇಕಾಗಿದ್ದ ಮತ್ತು ಇಳಿಯಬೇಕಾಗಿದ್ದ ಎಲ್ಲ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ನಿರ್ಬಂಧಿಸಲಾಗಿದೆ. ಶ್ವೇತಭವನ ಮತ್ತು ಕ್ಯಾಪಿಟಲ್ ಹಿಲ್‌ನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿ ಈ ವಿಮಾನ ನಿಲ್ದಾಣವಿದ್ದು, ವಿಶ್ವದ ಅತ್ಯಂತ ಬಿಗಿ ನಿಯಂತ್ರಣವಿರುವ ಕೆಲವೇ ಕೆಲವು ವಿಮಾನನಿಲ್ದಾಣಗಳ ಪೈಕಿ ಇದೂ ಒಂದಾಗಿದೆ.
ಇನ್ನು ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ ಅಮೆರಿಕ ಸೇನೆಯ ಅಧಿಕಾರಿಯಲ್ಲದೆ ವಾಯುಪಡೆಯ ಮೂವರು ಸಿಬ್ಬಂದಿಯಿದ್ದರು. ಸೇನಾ ತರಬೇತಿಗಾಗಿ ಇದರ ಹಾರಾಟ ನಡೆಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಹತ್ತಿರದ ಕೆನಡಿ ಸೆಂಟರ್ ವೀಕ್ಷಣಾ ಕ್ಯಾಮೆರಾದಲ್ಲಿ ಘಟನೆಯ ವೀಡಿಯೋ ಸೆರೆಯಾಗಿದ್ದು, ವಿಮಾನ-ಕಾಪ್ಟರ್ ಡಿಕ್ಕಿ ಹೊಡೆದು ಬೆಂಕಿಯುಂಡೆಯಂತಾಗಿ ನದಿಗೆ ಉರುಳುವ ದೃಶ್ಯ ಅದರಲ್ಲಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಧ್ಯಕ್ಷ ಟ್ರಂಪ್ ಗೆ ಘಟನೆ ಬಗ್ಗೆ ವಿವರಣೆ
ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಮಾಹಿತಿ ದೊರಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ಅಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದು, ಮೇಲ್ವಿಚಾರಣೆ ಕೈಗೊಂಡಿದ್ದಾರೆ” ಎಂದು ಹೇಳಿದರು. ರೇಡಿಯೋ ಟ್ರಾನ್ಸ್ ಪಾಂಡರ್‌ನ ದತ್ತಾಂಶದ ಪ್ರಕಾರ ಅಪಘಾತದ ವೇಳೆ ವಿಮಾನವು ಸುಮಾರು 400 ಅಡಿ ಎತ್ತರದಲ್ಲಿತ್ತು ಮತ್ತು ಗಂಟೆಗೆ ಸುಮಾರು 140 ಮೈಲು ವೇಗದಲ್ಲಿತ್ತು.
ಘಟನೆ ಬಗ್ಗೆ ಫೆಡರಲ್ ವಿಮಾನಯಾನ ಪ್ರಾಧಿಕಾರ (ಎಫ್ಎಎ) ತನಿಖೆ ಪ್ರಾರಂಭಿಸಿದೆ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ.