ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ತಮ್ಮಆಟದ ವೇಳೆಯಲ್ಲಿ ಅತ್ಯಂತ ಸ್ಫೋಟಕ ಬ್ಯಾಟರ್ ಎನಿಸಿಕೊಂಡಿದ್ದರು. ಈಗ ಅವರು ಕೋಚಿಂಗ್ ಹುದ್ದೆಯಲ್ಲಿದ್ದಾರೆ. ಅವರ ಪುತ್ರ ರಾಕಿ ಫ್ಲಿಂಟಾಫ್ (Rocky Flintoff) ವೃತ್ತಿಪರ ಕ್ರಿಕೆಟ್ ಆರಂಭಿಸಿದ್ದು ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುವ ಲಕ್ಷಣ ತೋರುತ್ತಿದ್ದಾರೆ. ಅವರು ಕ್ಲಬ್ ಪಂದ್ಯವೊಂದರಲ್ಲಿ ಶತಕ ಬಾರಿಸಿದ್ದು ಈ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ (Australia) ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆಡಿದ 16ರ ವರ್ಷದ ರಾಕಿ 108 ರನ್ ಗಳಿಸಿ ಮಿಂಚಿದ್ದಾರೆ. ಇದರೊಂದಿಗೆ ಶತಕ ಬಾರಿಸಿದ ಅತ್ಯಂತ ಕಿರಿಯ ಇಂಗ್ಲೆಂಡ್ ಲಯನ್ಸ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ತಮ್ಮದಾಗಿಸಿಕೊಂಡಿದ್ದಾರೆ. ಅಂದ ಹಾಗೆ ಸೀನಿಯರ್ ಫ್ಲಿಂಟಾಫ್ ತಂಡದ ಕೋಚ್ ಆಗಿದ್ದಾರೆ. ಅವರು ತಮ್ಮ 20ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಜೂನಿಯರ್ ತಂಡದ ಪರವಾಗಿ ಶತಕ ಬಾರಿಸಿದ್ದರು.
9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಕಿ 127 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ತಂಡ 161 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದಿದ್ದ ರಾಕಿ ಸ್ಫೋಟಕ ಬ್ಯಾಟಿಂಗ ಮಾಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಫ್ರೆಡೀ ಮೆಕ್‌ಕ್ಯಾನ್ ಜೊತೆ 8ನೇ ವಿಕೆಟ್‌ಗೆ ರಾಕಿ ಫ್ಲಿಂಟಾಫ್ 66 ರನ್‌ಗಳನ್ನು ಗಳಿಸಿದ್ದಾರೆ.
ಈ ಹಿಂದಿನ ಪಂದ್ಯದಲ್ಲಿ ಆಂಡ್ರೆ ಫ್ಲಿಂಟಾಫ್ ಪುತ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿ ಔಟ್ ಆಗಿದ್ದರು.

ರಾಕಿ ಫ್ಲಿಂಟಾಫ್ ವಿವರ
ರಾಕಿ ಫ್ಲಿಂಟಾಫ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 4 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 87 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದಲ್ಲದೆ, ರಾಕಿ 7 ಲಿಸ್ಟ್ ʻಎʼ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕೇವಲ ಒಂದು ಅರ್ಧಶತಕದೊಂದಿಗೆ 167 ರನ್ ಗಳಿಸಿದ್ದಾರೆ. ರಾಕಿ ಗಳಿಸಿದ ಶತಕ ಅವರಿಗೆ ತುಂಬಾ ವಿಶೇಷ.
ರಾಕಿ ಫ್ಲಿಂಟಾಫ್ ಲ್ಯಾನ್ಸ್‌ಶೈರ್ ಕಳೆದ ವರ್ಷ ತಂಡದ ಪರ ಆಡಲು ಸಹಿ ಹಾಕಿದ್ದರು. ಇದು ಇವರ ಮೊದಲ ವೃತ್ತಿಪರ ಗುತ್ತಿಗೆ. ತಂಡದಲ್ಲಿ ರಾಕಿ ಜೊತೆಗೆ ಇಂಗ್ಲೆಂಡ್ ಹಿರಿಯರ ತಂಡದ ಶೋಯೆಬ್ ಬಶೀರ್, ಪ್ಯಾಟ್ ಬ್ರೌನ್, ಜಾಶ್ ಟಾಂಗ್ ಹಾಗೂ ಜಾಶ್ ಟರ್ನರ್ ಕೂಡ ಆಡುತ್ತಿದ್ದಾರೆ.