ಬೆಂಗಳೂರು : ಮನೆಯಲ್ಲಿ ಪತಿ- ಪತ್ನಿ (husband-wife)ಮಧ್ಯೆ ಜೋರಾದ ಜಗಳವಾಗಿದೆ. ಹೀಗಾಗಿ ಪತ್ನಿ ತನ್ನ ತವರು ಸೇರಿದರೆ, ಪತಿ ತನ್ನ ಮನೆಗೆ ಹೋಗಿದ್ದಾರೆ. ಇವರಿಬ್ಬರೂ ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಖದೀಮ ಸಿಕ್ಕಿದ್ದನ್ನೆಲ್ಲ ದೋಚಿ ಪರಾರಿಯಾಗಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು(police) ಆರೋಪಿಯನ್ನು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಆಟೋ ಚಾಲಕನನ್ನು ಚಂದ್ರಾಲೇಔಟ್(ChandraLayout) ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸತೀಶ್ ಬಂಧಿತ ಆರೋಪಿ. ಆರೋಪಿ ಚಂದ್ರಾಲೇಔಟ್ ಪೊಲೀಸ್ ಠಾಣಾ(police station) ವ್ಯಾಪ್ತಿಯ ಭೈರವೇಶ್ವರ ನಗರದ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಸದ್ಯ ಬಂಧಿತನಿಂದ 16.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಕಸಾಲಿಗರಾಗಿದ್ದ ಮನೆ ಮಾಲೀಕ ಮನೆಯಲ್ಲಿ ಚಿನ್ನಾಭರಣಗಳ ತಯಾರಿ ಕೆಲಸ ಮಾಡಿಕೊಂಡಿದ್ದರು. ಆದರೆ, ಜ. 1ರಂದು ಪತಿ ಹಾಗೂ ಪತ್ನಿಯ ಮಧ್ಯೆ ಜಗಳ ನಡೆದ ಹಿನ್ನೆಲೆಯಲ್ಲಿ ಪತ್ನಿ ಬೇಸರಗೊಂಡು ತಮ್ಮ ತವರು ಮನೆ ಸೇರಿದ್ದರು. ಇತ್ತ ಮನೆ ಮಾಲೀಕ ಸಹ ಪತ್ನಿಯ ಮೇಲಿನ ಸಿಟ್ಟಿನಿಂದ ಮಕ್ಕಳಿಬ್ಬರನ್ನೂ(childrens) ಕರೆದುಕೊಂಡು ತಮ್ಮ ಸ್ವಂತ ಊರು ಸಾಗರಕ್ಕೆ ತೆರಳಿದ್ದರು.
ಮನೆಯಿಂದ ಬಸ್ ನಿಲ್ದಾಣದವರೆಗೆ ತೆರಳಲು ಮನೆ ಮಾಲೀಕ ಆಟೋ ಬುಕ್ ಮಾಡಿದಾಗ ಆರೋಪಿ ಚಾಲಕ ಸತೀಶ್ ಬಂದಿದ್ದಾನೆ. ಈ ವೇಳೆ ಆತ್ಮೀಯವಾಗಿ ಮಾತನಾಡಿಕೊಂಡು ಮನೆ ಮಾಲೀಕ ಮತ್ತು ಆತನ ಮಕ್ಕಳನ್ನು ನಿಗದಿತ ಸ್ಥಳಕ್ಕೆ ಬಿಟ್ಟು, ಮರಳಿ ಮನೆಗೆ ಬಂದು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾನೆ.
ಆಗ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸೇರಿದಂತೆ ಸುಮಾರು 20 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾನೆ. ಪತ್ನಿ ಮರಳಿ ಬಂದಾಗ ಈ ವಿಷಯ ಗಮನಕ್ಕೆ ಬಂದಿದೆ. ನಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅಕ್ಕಪಕ್ಕದ ಸಿಸಿಟಿವಿ(cctv) ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.