Sealdah Court finds Sanjay Roy guilty in RG Kar rape-murder case
ಕೋಲ್ಕೊತಾದ ಆರ್.ಜಿ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ. ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಶನಿವಾರ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ (ಜ.20) ಪ್ರಕಟಿಸಲಿದ್ದಾರೆ.
ಕಳೆದ ವರ್ಷ ಆಗಸ್ಟ್ 9ರಂದು ಈ ಘಟನೆ ನಡೆದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಭಾರಿ ಆಕ್ರೋಶ ಮತ್ತು ಸುದೀರ್ಘ ಪ್ರತಿಭಟನೆಗೆ ಕಾರಣವಾಗಿತ್ತು. ಸ್ಥಳೀಯ ಪೊಲೀಸರಿಗೆ ಸ್ವಯಂ ಸೇವಕರ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ ನನ್ನು ಪೊಲೀಸರು ಬಂಧಿಸಿದ್ದರು.
ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ವಿಚಾರಣೆ ಆರಂಭಿಸಿ 57 ದಿನಗಳ ಬಳಿಕ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತ ಪೊಲೀಸರು ಆಗಸ್ಟ್ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನವೇ ಆತನನ್ನು ಬಂಧಿಸಿದ್ದರು.
ಕೋಲ್ಕೊತಾ ಹೈಕೋರ್ಟ್ ನಂತರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಅಂತೆಯೇ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಾದಿಸಿದೆ. ಈ ಮಹತ್ವದ ಪ್ರಕರಣದ ವಿಚಾರಣೆಯು ನವೆಂಬರ್ 12ರಂದು ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಜನವರಿ 9ರಂದು ವಿಚಾರಣೆ ಕೊನೆಗೊಂಡಿತ್ತು.
ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್, ಡಾ.ಆಶಿಶ್ ಕುಮಾರ್ ಪಾಂಡೆ, ಬಿಪ್ಲಬ್ ಸಿಂಘಾ, ಸುಮನ್ ಹಜ್ರಾ ಮತ್ತು ಅಫ್ಸರ್ ಅಲಿ ಖಾನ್ ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ.
ದೊಡ್ಡ ಪ್ರಮಾಣದ ಆಕ್ರೋಶ
ವೈದ್ಯ ವಿದ್ಯಾರ್ಥಿನಿಯ ಹತ್ಯೆ ಪ್ರಕರಣವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ದೀರ್ಘಕಾಲದ ಪ್ರತಿಭಟನೆಗೆ ಕಾರಣವಾಗಿತ್ತು. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆ ಮತ್ತು ಸುರಕ್ಷತೆ ಹೆಚ್ಚಿಸುವಂತೆ ಆಗ್ರಹಿಸಿ ದೇಶದ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆಸಿದ್ದವು. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ– ಪ್ರತ್ಯಾರೋಪಕ್ಕೂ ಈ ಘಟನೆ ಕಾರಣವಾಗಿತ್ತು.