ನಾಲ್ಕು ವರ್ಷದ ಮಗುವಿನ ಮೇಲೆ ನಾಯಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ. ಮಗುವನ್ನು ರಕ್ಷಿಸಲು ಮುಂದಾದ ತಂದೆಯ ಮೇಲೆಯೂ ದಾಳಿ ಮಾಡಿದೆ.
ಈ ಘಟನೆ ಇಂದಿರಾನಗರ ಪೊಲೀಸ್ ಠಾಣಾ(police station) ವ್ಯಾಪ್ತಿಯ ಗಣೇಶ ಟೆಂಪಲ್ ಹತ್ತಿರ ನಡೆದಿದೆ. ರ್ಯಾಟ್ ವಿಲ್ಲರ್ ನಾಯಿಯಿಂದ ದಾಳಿ ನಡೆದಿದೆ.
ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಸಾಕು ನಾಯಿ, ಗೇಟ್ ಹಾರಿ ದಾಳಿ ನಡೆಸಿದೆ. ನೋಡ ನೋಡುತ್ತಿದ್ದಂತೆ ಮೆಟ್ಟಿಲುಗಳ ಮೇಲೆ ಮಗುವನ್ನು ಎಳೆದೊಯ್ದು ಮನೋ ಇಚ್ಛೆ ಕಚ್ಚಿದೆ. ಮಗುವಿನ ಕೂಗಾಟ ಕೇಳಿ ಮನೆಯಲ್ಲಿದ್ದ ತಂದೆ ಓಡಿ ಹೋಗಿ ಮಗುವನ್ನು ರಕ್ಷಿಸಿದ್ದಾರೆ.
ಈ ವೇಳೆ ತಂದೆಗೂ ನಾಯಿ ಕಚ್ಚಿದೆ. ಈ ಘಟನೆ ಜ. 5ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗೇಶ್ವರಿ ಹಾಗೂ ಸಂಜಯ್ ಎಂಬುವವರಿಗೆ ಸೇರಿದ್ದ ನಾಯಿ ದಾಳಿ ನಡೆಸಿದೆ. ಮಾಲೀಕರು ಕಳೆದ 8 ತಿಂಗಳ ಹಿಂದೆಯೇ ಈ ನಾಯಿಯನ್ನು ಸಾಕುತ್ತಿದ್ದಾರೆ. ಹಿಂದೆ ಕೂಡ ಅದು ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ ಎನ್ನಲಾಗಿದೆ. ಸ್ಥಳೀಯರು ನಾಯಿಯನ್ನು ಹೊರಗೆ ಬಿಡಬೇಡಿ ಎಂದು ಎಷ್ಟು ಬಾರಿ ಹೇಳಿದರೂ ಮಾಲೀಕರು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ನಾಯಿ ಮಾಲೀಕರಾದ ಮಾಗೇಶ್ವರಿ ಹಾಗೂ ಸಂಜಯ ವಿರುದ್ಧ ಇಂದಿರಾನಗರ (Inidira nagar) ಠಾಣೆಯಲ್ಲಿ ಎಫ್ ಐಆರ್(FIR) ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಮಾಲೀಕರು ನಾಯಿಯನ್ನು ಬೇರೆ ಕಡೆ ಕಳುಹಿಸಿದ್ದಾರೆ. ಚಿಕಿತ್ಸೆಗೆಂದು ಹಣ ಕೇಳಿದರೂ ಮಾಲೀಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನಾಯಿ ದಾಳಿಗೆ ಒಳಗಾದ ಕುಟುಂಬ ತಿಳಿಸಿದೆ.