ಬೆಳಗಾವಿ: ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯೊಬ್ಬರು ಡ್ಯೂಟಿ ಬದಲಿಸಿದ್ದಕ್ಕೆ ಆತ್ಮಹತ್ಯೆಯ ಹೈಡ್ರಾಮಾ ಮಾಡಿರುವ ಘಟನೆಯೊಂದು ನಡೆದಿದೆ.
ಪೊಲೀಸ್ ಕಾನ್ಸ್ಟೇಬಲ್ ಮುದಕಪ್ಪ ಉದಗಟ್ಟಿ ಈ ರೀತಿ ಹೈಡ್ರಾಮಾ ಮಾಡಿದವರು. ಬೆಳಗಾವಿಯ ಉದ್ಯಮಬಾಗ ಠಾಣೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಅಷ್ಟೇ ಅಲ್ಲ ಈ ವ್ಯಕ್ತಿಯ ಅವಾಂತರದಿಂದಾಗಿ ಠಾಣೆಯ ಪಿಐ ಡಿ.ಕೆ. ಪಾಟೀಲ್ ಲೋ ಬಿಪಿ ಆಗಿ ಆಸ್ಪತ್ರೆ ಸೇರಿದ್ದಾರೆ.
ಮುದಕಪ್ಪ ಎರಡು ದಿನ ರಜೆ ಪಡೆದಿದ್ದರು. ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾಗ ಅವರ ಡ್ಯೂಟಿ ಬದಲಾಯಿಸಿ ನಿಯೋಜಿಸಿದ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಮುದುಕಪ್ಪ ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ನನ್ನ ಡ್ಯೂಟಿ ಬದಲಾಯಿಸಿದರೆ, ನಾನು ವಿಷ ಸೇವಿಸುತ್ತೇನೆಂದು ವಿಷ ಸೇವಿಸಿದಂತೆ ನಾಟಕವಾಡಿ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಇನ್ನುಳಿದ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮುದುಕಪ್ಪ ವಿಷ ಸೇವಿಸಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ನಂತರ ಹಿರಿಯ ಅಧಿಕಾರಿಗಳು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಈ ನಾಟಕದಿಂದಾಗಿ ಪಿಐ ಡಿಕೆ ಪಾಟೀಲ್ ಅಸ್ವಸ್ಥಗೊಂಡಿದ್ದಾರೆ. ಅವರಿಗೆ ಲೋ ಬಿಪಿ ಆಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬೆಳಗಾವಿ ಪೊಲೀಸ್ ಆಯುಕ್ತ ಯುಡಾ ಮಾರ್ಟಿನ್ ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.