ನವದೆಹಲಿ: ದೇಶದಲ್ಲಿ ಮೇಕ್ ಇನ್ ಇಂಡಿಯಾ ಎಂಬ ಘೋಷವಾಕ್ಯವನ್ನು ಪ್ರಧಾನಿ ಮೋದಿ ಘೋಷಿಸುತ್ತಿದ್ದಂತೆ, ಹಲವು ಕ್ಷೇತ್ರಗಳಲ್ಲಿ ಭಾರತ ಮುಂದೆ ಸಾಗಿದೆ ಎಂಬುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತಿವೆ. ಭಾರತದ ರಕ್ಷಣಾ ವಲಯದ (Defence sector) ಮ್ಯಾನುಫ್ಯಾಕ್ಚರಿಂಗ್ ಕಾರ್ಯ ಕಳೆದ ಒಂದು ದಶಕದಲ್ಲಿ ಗಮನಾರ್ಹವಾಗಿ ಬೆಳೆದಿರುವುದು ಕೂಡ ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಕಳೆದ 10 ವರ್ಷಗಳಲ್ಲಿ ಈ ಕ್ಷೇತ್ರದಿಂದ ಆಗುವ ರಫ್ತು ಪ್ರಮಾಣ ಶೇ. 10ರಷ್ಟು ಹೆಚ್ಚಾಗಿದೆ. ದಶಕದ ಹಿಂದೆ ಭಾರತದಿಂದ ರಕ್ಷಣಾ ವಲಯದ ಸಾಮಾಗ್ರಿಗಳು 2 ಸಾವಿರ ಕೂಟೋ ರೂ.ನಷ್ಟು ರಫ್ತಾಗುತ್ತಿತ್ತು. ಈಗ ಅದು ವರ್ಷವೊಂದಕ್ಕೆ 21 ಸಾವಿರ ಕೋಟಿ ರೂ.ಗೆ ತಲುಪಿದೆ.
ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಧ್ಯಪ್ರದೇಶದ ಮಹೂ (MHow) ಪಟ್ಟಣದ ಆರ್ಮಿ ವಾರ್ ಕಾಲೇಜ್ನಲ್ಲಿ ಸೇನಾಧಿಕಾರಿಗಳನ್ನು (officers) ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ. 2029ರೊಳಗೆ ಭಾರತದ ಡಿಫೆನ್ಸ್ ರಫ್ತು ಮೌಲ್ಯ 50,000 ಕೋಟಿ ರೂ ಗಡಿ ದಾಟುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಮಾಹಿತಿ ಯುದ್ಧಕಲೆ, ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಧಾರಿತ ಯುದ್ಧಕಲೆ, ಪರೋಕ್ಷ ಯುದ್ಧ, ಎಲೆಕ್ಟ್ರೋಮ್ಯಾಗ್ನೆಟಿಕ್ ಸಮರ, ಬಾಹ್ಯಾಕಾಶ ಸಮರ, ಸೈಬರ್ ದಾಳಿ ಇತ್ಯಾದಿ ಅಸಂಪ್ರದಾಯಿಕ ಯುದ್ಧ ವಿಧಾನಗಳು ಇವತ್ತಿನ ಕಾಲಘಟ್ಟದಲ್ಲಿ ಎದುರಾಗುತ್ತಿವೆ. ಇಂತಹ ಸಂಕೀರ್ಣ ಯುದ್ಧಗಳನ್ನು ಎದುರಿಸಲು ಸೂಕ್ತ ತಂತ್ರಜ್ಞಾನ, ತರಬೇತಿ ಇತ್ಯಾದಿ ಎಲ್ಲವೂ ಅಗತ್ಯವಾಗಿರುತ್ತದೆ ಎಂದಿದ್ದಾರೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಆರ್ಥಿಕತೆ ಮತ್ತು ಮಿಲಿಟರಿ ದೇಶವನ್ನಾಗಿ ಭಾರತವನ್ನು ಮಾಡಬೇಕೆಂಬ ಸಂಕಲ್ಪ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.