ಉತ್ತಮ ಜಲ ಸಂಪನ್ಮೂಲ ಹೊಂದಿರುವ ರಾಷ್ಟ್ರಗಳು ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯ ಪ್ರದೇಶದ ಖಜುರಾಹೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದೂರದೃಷ್ಟಿ ದೇಶದ ಜಲ ಸಂಪನ್ಮೂಲಗಳ ಬಲವರ್ಧನೆ, ಅವುಗಳ ನಿರ್ವಹಣೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದೆ. ನದಿ ಕಣಿವೆ ಯೋಜನೆಗಳ ಅಭಿವೃದ್ಧಿ ಮತ್ತು ಕೇಂದ್ರ ಜಲ ಆಯೋಗದ ರಚನೆಯಲ್ಲಿ ಅಂಬೇಡ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ದೇಶದ ಹೆಚ್ಚುತ್ತಿರುವ ನೀರಿನ ಸಂರಕ್ಷಣೆಯ ಅಗತ್ಯಕ್ಕೆ ಎಂದಿಗೂ ಗಮನ ಕೊಡಲಿಲ್ಲ. 21ನೇ ಶತಮಾನದ ಪ್ರಮುಖ ಸವಾಲೆಂದರೆ ನೀರಿನ ಭದ್ರತೆ ಎಂದು ಹೇಳಿದ್ದಾರೆ.
ಈ ವೇಳೆ ಪ್ರಧಾನಿ ರಾಜ್ಯದ ಖಾಂಡ್ವಾ ಜಿಲ್ಲೆಯಲ್ಲಿ ಓಂಕಾರೇಶ್ವರ ತೇಲುವ ಸೌರ ಯೋಜನೆ ಉದ್ಘಾಟಿಸಿದರು. ನದಿ ಜೋಡಣೆ ಯೋಜನೆಯ ಭಾಗವಾದ ದೌಧನ್ ನೀರಾವರಿ ಯೋಜನೆಯ ಅಡಿಗಲ್ಲು ಹಾಕಿದರು. ಮಧ್ಯಪ್ರದೇಶದ 10 ಜಿಲ್ಲೆಗಳಲ್ಲಿ ಸುಮಾರು 44 ಲಕ್ಷ ಮತ್ತು ಉತ್ತರ ಪ್ರದೇಶದ 21 ಲಕ್ಷ ಜನರು ಈ ಯೋಜನೆಯಡಿ ಕುಡಿಯುವ ನೀರು ಪಡೆಯಲಿದ್ದಾರೆ. ಈ ಯೋಜನೆಯಿಂದ 2,000 ಗ್ರಾಮಗಳ ಸುಮಾರು 7.18 ಲಕ್ಷ ಕೃಷಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸಲಿವೆ.