ಅಪಘಾತಕ್ಕೆ ಬಲಿಯಾಗಿದ್ದ ಮಹಿಳೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕುಟುಂಬ ಸದಸ್ಯರನ್ನು ಕಳೆದುಕೊಂಡ ನೋವಿನಲ್ಲೂ ಅವರ ಕುಟುಂಬ ಸಾವಿನಲ್ಲೂ (Turning grief into life) ಸಾರ್ಥಕತೆ ಮೆರೆದಿದ್ದಕ್ಕೆ ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕೊಪ್ಪಳ ಭಾಗ್ಯನಗರದಲ್ಲಿ ಈ ಘಟನೆ ನಡೆದಿದೆ.
ಎಸ್.ಎಸ್. ಗೌಡರ ಎಂಬುವವರ ಪತ್ನಿ ಗೀತಾ ಗೌಡ ಅಪಘಾತಕ್ಕೆ ಬಲಿಯಾಗಿದ್ದರು. ಘಟನೆಯಲ್ಲಿ ಅವರ ಮೆದುಳು ಡೆಡ್ ಆಗಿತ್ತು. ಹೀಗಾಗಿ ಕುಟುಂಬಸ್ಥರು ಅವರ ಅಂಗಾಂಗ ದಾನ ಮಾಡಿದ್ದಾರೆ. ಗೀತಾ ಅವರಿಂದಾಗಿ ಈಗ ಏಳು ಜನರು ಹೊಸ ಬದುಕು ಕಟ್ಟಿಕೊಳ್ಳುವಂತಾಗಿದೆ.
ಕಿಡ್ನಿ, ಲಿವರ್, ಹಾರ್ಟ್, ಕಣ್ಣುಗಳನ್ನು ದಾನ ಮಾಡಲಾಗಿದೆ. ಮೃತ ಗೀತಾ, ಅವರ ತಾಯಿ, ಮಗಳು, ಪತಿ ಎಲ್ಲರೂ ಮೂಡಬಿದರೆಯ ಆಳ್ವಾ ಕಾಲೇಜಿನಲ್ಲಿ ನಡೆದ ವಿರಾಸತ್ ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಡಿಸೆಂಬರ್ 15 ರಂದು ಭಾಗ್ಯನಗರಕ್ಕೆ ಮರಳುತ್ತಿದ್ದ ವೇಳೆ ಶಿವಮೊಗ್ಗ ಹೊರವಲಯದ ಬೇಡರಹೊಸಳ್ಳಿ ಗ್ರಾಮದ ಬಳಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಗೀತಾ ಅವರ ತಾಯಿ ಸಾವನ್ನಪ್ಪಿದ್ದರು.
ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಗೀತಾ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೀತಾ ನಿನ್ನೆ ಸಂಜೆ ಸಾವನ್ನಪ್ಪಿದ್ದರು. ಹೀಗಾಗಿ ಕುಟುಂಬಸ್ಥರು ನೋವಿನಲ್ಲೂ ಅಂಗಾಂಗ ದಾನ ಮಾಡಿದ್ದಾರೆ.