ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನವನ್ನು ಮಾಜಿ ಪ್ರಧಾನಿ ಶೇಖ್ ಹಸೀನಾ ಖಂಡಿಸಿದ್ದಾರೆ.
ಹಿಂದೂ ನಾಯಕ ಚಿನ್ಮಯ್ ದಾಸ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ದೇಶ ದ್ರೋಹ ಆರೋಪದ ಹಿನ್ನೆಲೆಯಲ್ಲಿ ಈ ವಾರದ ಆರಂಭದಲ್ಲಿ ಚಿನ್ಮಯ್ ದಾಸ್ ಅವರನ್ನು ಬಂಧಿಸಲಾಗಿತ್ತು. ಸನಾತನ ಧಾರ್ಮಿಕ ಸಮುದಾಯದ ಹಿರಿಯ ನಾಯಕನನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಶೇಕ್ ಹಸೀನಾ, ಚಿತ್ತಗಾಂಗ್‌ನಲ್ಲಿ ದೇವಸ್ಥಾನವನ್ನು ಸುಟ್ಟು ಹಾಕಲಾಗಿದೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ಮಂದಿರಗಳು, ಚರ್ಚ್‌ಗಳು, ಮಠಗಳು ಮತ್ತು ಮನೆಗಳ ಮೇಲೆ ದಾಳಿ, ಧ್ವಂಸ, ಲೂಟಿ ಮಾಡಿ ಬೆಂಕಿ ಹಚ್ಚಲಾಗಿತ್ತು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಎಲ್ಲಾ ಸಮುದಾಯಗಳ ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.