ಮುಂಬೈ : ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳು ಹಾಗೂ ರಾಜ್ಯದ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ನಾಳೆಗೆ ಹೊರ ಬೀಳಲಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.
288 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಇಡೀ ರಾಷ್ಟ್ರವೇ ಕಾಯುತ್ತಿದೆ. ನ. 23ರ ಮಧ್ಯಾಹ್ನದ ಹೊತ್ತಿಗೆ ಎಲ್ಲ ಕ್ಷೇತ್ರಗಳ ಫಲಿತಾಂಶ ಬಹುತೇಕ ಹೊರ ಬೀಳಲಿದೆ. ಈಗಾಗಲೇ ಮತಗಟ್ಟೆಯ ಸಮೀಕ್ಷೆಗಳು ಹೊರ ಬಿದ್ದಿದ್ದು, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಗೆ ಜಯ ಸಿಗಬಹುದು ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆದರೂ ಮತದಾರ ಬರೆದ ಭವಿಷ್ಯ ಮಾತ್ರ ನಾಳೆಗೆ ಹೊರ ಬೀಳಲಿದೆ.
ಮಹಾರಾಷ್ಟ್ರದಲ್ಲಿ ಸರಳ ಬಹುಮತಕ್ಕೆ 145 ಸ್ಥಾನಗಳು ಬೇಕು. ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿಯ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಬಿಜೆಪಿ – ಶಿವಸೇನೆ ಶಿಂಧೆ ಬಣ – ಎನ್ ಸಿಪಿ ಅಜಿತ್ ಪವಾರ್ ಬಣದ ಮಹಾಯುತಿ ಹಾಗೂ ಕಾಂಗ್ರೆಸ್ – ಶಿವಸೇನೆ ಠಾಕ್ರೆ ಬಣ – ಎನ್ ಸಿಪಿ ಶರದ್ ಪವಾರ್ ಬಣದ ಮಹಾ ವಿಕಾಸ್ ಅಘಾಡಿ ಮಧ್ಯೆ ನೇರ ಫೈಟ್ ನಡೆದಿದೆ.
ಬಿಜೆಪಿ 149, ಶಿವಸೇನೆ ಶಿಂಧೆ ಬಣ 81 ಮತ್ತು ಅಜಿತ್ ಪವಾರ್ ಅವರ ಎನ್ ಸಿಪಿ 59 ಕ್ಷೇತ್ರದಲ್ಲಿ ಸ್ಪರ್ಧಿಸಿವೆ. ಅಲ್ಲದೇ, ಕಾಂಗ್ರೆಸ್ 101, ಶಿವಸೇನೆ ಠಾಕ್ರೆ ಬಣ 95 ಮತ್ತು ಅಜಿತ್ ಪವಾರ್ ಅವರ ಎನ್ ಸಿಪಿ 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.