ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನ. 15ರಿಂದ ಬಾಗಿಲು ತೆರೆದಿದೆ. ಹೀಗಾಗಿ ಮಾಲಾಧಾರಿಗಳು ಅಯ್ಯಪ್ಪ ದರ್ಶನ ತೆರಳುತ್ತಿದ್ದಾರೆ. ಹೀಗಾಗಿ ಶಬರಿಮಲೆಯಲ್ಲಿ ಮಂಡಲ ಪರ್ವ ಆರಂಭವಾಗಿದೆ. ಶರಣು ಮಂತ್ರ ಘೋಷಗಳ ಹೊಸ ಮಂಡಲ ಪರ್ವ ಕಾಲ ಶುರುವಾಗಿದೆ.
18 ಮೆಟ್ಟಿಲು ಬಳಿಯ ಕುಂಡಕ್ಕೆ ಅಗ್ನಿ ಸ್ಪರ್ಶ ನೀಡಿದ ನಂತರ ಭಕ್ತರಿಗೆ 18 ಮೆಟ್ಟಿಲೇರಿ ಅಯ್ಯಪ್ಪ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಶುಕ್ರವಾರ 30 ಸಾವಿರ ಭಕ್ತರು ಆನ್‌ಲೈನ್ ಹಾಗೂ 10 ಸಾವಿರಕ್ಕೂ ಹೆಚ್ಚು ಭಕ್ತರು ಸ್ಪಾಟ್ ಬುಕ್ಕಿಂಗ್ ಮೂಲಕ ಅಯ್ಯಪ್ಪ ದರ್ಶನ ಪಡೆದಿದ್ದಾರೆ.
ಡಿಸೆಂಬರ್ 22 ರಂದು ಬೆಳಗ್ಗೆ 7 ಕ್ಕೆ ಆರನ್ಮುಳ ಪಾರ್ಥ ಸಾರಥಿ ದೇವಳದಿಂದ ಅಯ್ಯಪ್ಪನಿಗೆ ತೊಡಿಸುವ ತಂಗ ಅಂಗಿ ಆಭರಣಗಳ ಮೆರವಣಿಗೆ ಆರಂಭವಾಗಲಿದೆ. ಡಿಸೆಂಬರ್ 25 ರಂದು ಮಧ್ಯಾಹ್ನ 12.30ಕ್ಕೆ ತಂಗ ಅಂಗಿ ಘೋಷ ಯಾತ್ರೆ ಪಂಪಾ ತಲುಪಲಿದೆ. ಸಂಜೆ 6.30ಕ್ಕೆ ಅಯ್ಯಪ್ಪನಿಗೆ ತಂಗ ಅಂಗಿ ತೊಡಿಸಿ ದೀಪಾರಾಧನೆ, ಡಿಸೆಂಬರ್ 26 ರಂದು ಬೆಳಗ್ಗೆ 11.30ಕ್ಕೆ ತಂಗ ಅಂಗಿ ತೊಡಿಸಿ ಮಂಡಲ ಪೂಜೆ ನಡೆಸಲಾಗುತ್ತದೆ.
ರಾತ್ರಿ ಹರಿವರಾಸನಂ ಗಾಯನದ ನಂತರ 11ಕ್ಕೆ ದೇಗುಲ ಮುಚ್ಚುವುದರೊಂದಿಗೆ ಈ ಬಾರಿಯ ಮಂಡಲ ಕಾಲದ ಯಾತ್ರೆ ಮುಕ್ತಾಯವಾಗಲಿದೆ. ಆನಂತರ ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30 ರಂದು ಸಂಜೆ 5 ಕ್ಕೆ ಮತ್ತೆ ಶಬರಿಮಲೆ ಅಯ್ಯಪ್ಪನ ದೇಗುಲ ತೆರೆಯಲಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ಬೆಳಗ್ಗೆ 3ಕ್ಕೆ ತೆರೆಯಲಿದೆ. ಮಧ್ಯಾಹ್ನ 1ರ ವರೆಗೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಸಂಜೆ 3 ರಿಂದ ರಾತ್ರಿ 11ರ ವರೆಗೂ ಅವಕಾಶ ನೀಡಲಾಗುತ್ತದೆ.