ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಹಲವಾರು ಅಡತಡೆಗಳು ಎದುರಾಗುತ್ತಿದೆ. ಪಾಕ್ ಕ್ರಿಕೆಟ್ ಮಂಡಳಿ ಬಿಸಿಸಿಐ ಕೆರಳಿಸುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಐಸಿಸಿಯು ಪಾಕಿಸ್ತಾನಕ್ಕೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದುಬೈನಿಂದ ಇಸ್ಲಾಮಾಬಾದ್ ಗೆ ಕಳುಹಿಸಿದೆ. ಈಗ ಈ ಟ್ರೋಫಿಯನ್ನು ದೇಶದಾದ್ಯಂತ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧವಾಗಿದೆ. ಇದಕ್ಕಾಗಿ ಐಸಿಸಿಗೆ ಪಟ್ಟಿ ಸಲ್ಲಿಸಿತ್ತು. ಆದರೆ, ಪಾಕ್ ಸಲ್ಲಿಸಿದ ಪಟ್ಟಿಯಲ್ಲಿ ವಿವಾದಿತ ಜಾಗದ ಹೆಸರಿರುವುದನ್ನು ಮನಗಂಡಿರುವ ಐಸಿಸಿ, ಆ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯದಂತೆ ಸೂಚಿಸಿದೆ.
ಚಾಂಪಿಯನ್ಸ್ ಟ್ರೋಫಿ ನವೆಂಬರ್ 14 ರಂದು ಇಸ್ಲಾಮಾಬಾದ್ ತಲುಪಿದೆ. ನವೆಂಬರ್ 16 ರಿಂದ ನವೆಂಬರ್ 24 ರ ವರೆಗೆ ಅಭಿಮಾನಿಗಳ ನಡುವೆ ಪಾಕಿಸ್ತಾನದ ವಿವಿಧ ಸ್ಥಳಗಳಿಗೆ ಟ್ರೋಫಿ ಪ್ರದರ್ಶನ ನಡೆಸುತ್ತದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಆದರೆ, ಭಾರತ ಹೋಗಲು ನಿರಾಕರಿಸಿದೆ. ಪಾಕಿಸ್ತಾನವು ಹೈಬ್ರಿಡ್ ಮಾದರಿಗೆ ಸಿದ್ಧವಾಗದ ಕಾರಣ, ವೇಳಾಪಟ್ಟಿ ಪ್ರಕಟಣೆ ವಿಳಂಬವಾಗುತ್ತಿದೆ. ಪಂದ್ಯಾವಳಿಯ ವೇಳಾಪಟ್ಟಿಯನ್ನು ಕನಿಷ್ಠ 100 ದಿನಗಳ ಮುಂಚಿತವಾಗಿ ಘೋಷಿಸಲಾಗುತ್ತದೆ. ಆನಂತರವೇ ಪ್ರದರ್ಶನ ಮಾಡಲಾಗುತ್ತಿದೆ. ಆದರೆ, ಈ ಬಾರಿ ಐಸಿಸಿ ವಿಭಿನ್ನ ನಿಲುವು ತಾಳಿದೆ.