ಭಾರತ ಕ್ರಿಕೆಟ್ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ನ. 22 ರಿಂದ ಪಂದ್ಯ ಪ್ರಾರಂಭವಾಗಲಿದೆ.
ಈಗಾಗಲೇ ತಂಡದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ 18 ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಫಿಟ್ ಆಗಿದ್ದು, ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಗಾಯದಿಂದ ಬಳಲುತ್ತಿದ್ದ ಶಮಿ ತಂಡವನ್ನು ಪ್ರಕಟಿಸುವವರೆಗೂ ಫಿಟ್ ಆಗಿರಲಿಲ್ಲ. ಆದರೆ, ಈಗ ಪೂರ್ಣ ಚೇತರಿಸಿಕೊಂಡಿದ್ದಾರೆ. ಶಮಿ ಮತ್ತೆ ಅಖಾಡಕ್ಕೆ ಮರಳಿದ್ದು, ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಮಧ್ಯಪ್ರದೇಶದ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡಿದ್ದು, ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬಹುದು ಎಂದು ವರದಿಯೊಂದು ಹೇಳಿದೆ.
ಒಂದು ವರ್ಷದ ನಂತರ ಅಖಾಡಕ್ಕೆ ಮರಳಿದ ಶಮಿ, ಬಂಗಾಳದ ಪರ ಕಣಕ್ಕಿಳಿದಿದ್ದು ಮೊದಲ ಇನ್ನಿಂಗ್ಸ್ ನಲ್ಲಿ 19 ಓವರ್ ಬೌಲ್ ಮಾಡಿ, ನಾಲ್ಕು ವಿಕೆಟ್ ಪಡೆದಿದ್ದಾರೆ. ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಭಾರತ ತಂಡಕ್ಕೆ ಶಮಿ ಎಂಟ್ರಿಯಾಗಬಹುದು ಎನ್ನಲಾಗಿದೆ.
ಪೂರಕವಾಗಿ ರಣಜಿಯಲ್ಲಿ ಆಡುತ್ತಿರುವ ಶಮಿ ಅವರ ಫಿಟ್ನೆಸ್ ಹಾಗೂ ಫಾರ್ಮ್ ಗಮನಿಸಲು ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ ಅಜಯ್ ಮತ್ತು ಎನ್‌ಸಿಎ ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ಮೈದಾನಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ಹೀಗಾಗಿ ಶಮಿ ಮರಳಿ ತಂಡ ಸೇರಬಹುದು ಎನ್ನಲಾಗಿದೆ.