ಪಾಕಿಸ್ತಾನ್ ದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ನಾವು ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ಘೋಷಿಸಿದೆ. ಈ ಮಧ್ಯೆ ಪಾಕ್ ಕ್ರಿಕೆಟ್ ಮಂಡಳಿ ಕೂಡ ನಾಟಕೀಯ ಬೆದರಿಕೆ ಹಾಕುತ್ತಿದೆ.
ಭಾರತ ತಂಡ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದಾಗಿ ಪಾಕ್ ಕ್ರಿಕೆಟ್ ಮಂಡಳಿ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಬೇಕಾಗಿದೆ. ಆದರೆ, ಇದಕ್ಕೆ ಪಿಸಿಬಿ ಒಪ್ಪುತ್ತಿಲ್ಲ. ಇದನ್ನು ಮಾಡಿದರೆ, ಭಾರತಕ್ಕೆ ಬಗ್ಗಿದಂತಾಗುತ್ತದೆ. ಮುಜುಗರವಾಗತ್ತೆ ಎಂಬುವುದು ಪಿಸಿಬಿ ಲೆಕ್ಕಾಚಾರವಾಗಿದೆ. ಹೀಗಾಗಿಯೇ ಈಗ ನಾಟಕೀಯ ಬೆದರಿಕೆಗೆ ಮುಂದಾಗಿದೆ.
ಭಾರತ ತಂಡವು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿದರೆ, ಇನ್ಮುಂದೆ ನಾವು ಸಹ ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಾಕ್ ಬೆದರಿಕೆ ಹಾಕಿದೆ. ಸದ್ಯ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಒಂದು ವೇಳೆ ಭಾರತ ತಂಡವು ಪಾಕ್ ಗೆ ತೆರಳಲು ನಿರಾಕರಿಸಿದರೆ, ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತದ ವಿರುದ್ಧ ಯಾವುದೇ ಪಂದ್ಯವಾಡದಿರಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನ್ ತಂಡವು ಭಾರತದ ವಿರುದ್ಧದ ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿಯದಿದ್ದರೆ, ಬಿಸಿಸಿಐಗೆ ಹೆಚ್ಚಿನ ನಷ್ಟವಾಗಲಿದೆ. ಏಕೆಂದರೆ, ಪಾಕ್ ವಿರುದ್ಧದ ಪಂದ್ಯದಿಂದ ಬಿಸಿಸಿಐ ಭಾರೀ ಪ್ರಮಾಣದ ಆದಾಯ ಗಳಿಸುತ್ತಿದೆ. ಹೀಗಾಗಿ ನಾಟಕೀಯ ಬೆದರಿಕೆಗೆ ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಆದರೆ, ಬಿಸಿಸಿಐ ಮಾತ್ರ ಇದಕ್ಕೆ ಸೊಪ್ಪು ಹಾಕುವುದಿಲ್ಲ. ಏಕೆಂದರೆ, ಭಾರತದ ವಿರುದ್ಧದ ಪಂದ್ಯದಿಂದಲೂ ಪಾಕ್ ಕ್ರಿಕೆಟ್ ಮಂಡಳಿಗೆ ದುಡ್ಡು ಹರಿದು ಬರುತ್ತದೆ. ಹೀಗಾಗಿ ಭಾರತ ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ.