ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಮರ್ಪಕ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ.
ಹೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 631 ಜನ ವಿದ್ಯುತ್ ನಿಂದಾಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ.
ಇದು ರಾಜ್ಯದಲ್ಲಿ ಹೆಚ್ಚು ವ್ಯಾಪ್ತಿ ಹೊಂದಿರುವ ನಿಗಮ ಕೂಡ ಹೌದು. ಆದರೆ, ಅಸಮರ್ಪಕ ನಿರ್ವಹಣೆಯಿಂದಾಗಿ ಕಳೆದ 5 ವರ್ಷಗಳಲ್ಲಿ 631 ಜನರು ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 732 ಜಾನುವಾರುಗಳು ಕರೆಂಟ್ ಶಾಕ್ ನಿಂದ ಸಾವನ್ನಪ್ಪಿವೆ. ಇದು ಹೆಸ್ಸಾಂಕಿ ಅಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಜನರು ಆರೋಪಿಸಿದ್ದಾರೆ.
ವಿದ್ಯುತ್ ಅವಘಡಗಳು ಹೆಚ್ಚುತ್ತಿದ್ದರೂ ಸರಕಾರ ಪರಿಹಾರದ ಮೊತ್ತ ಮಾತ್ರ ಸಮರ್ಪಕವಾಗಿ ನೀಡುತ್ತಿಲ್ಲ. ಮನುಷ್ಯ ಸಾವನ್ನಪ್ಪಿದರೆ, ಅಥವಾ ಶಾಶ್ವತ ಪೂರ್ಣ ಅಂಗವಿಕಲತೆಗೆ ಒಳಗಾದರೆ 5 ಲಕ್ಷ ರೂ., ಭಾಗಶಃ ಅಂಗವಿಕಲತೆಗೆ ಕನಿಷ್ಠ 1ರಿಂದ 5 ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಕೇವಲ 445 ಅವಘಡಗಳಿಗೆ ಮಾತ್ರ ಪರಿಹಾರ ನೀಡಲಾಗಿದ್ದು, ಇನ್ನೂ ಜನ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ವಿದ್ಯುತ್ ಅವಘಡದಿಂದಾಗಿ 2020-21ರಲ್ಲಿ 125 ಜನರು, 2021-22ರಲ್ಲಿ 134, 2022-23ರಲ್ಲಿ 122, 2023-24ರಲ್ಲಿ 136, 2024ರಲ್ಲಿ ಇಲ್ಲಿಯವರೆಗೆ 114 ಜನ ಸಾವನ್ನಪ್ಪಿದ್ದಾರೆ. ಇನ್ನಾದರೂ ಹೆಸ್ಕಾಂ ಸಿಬ್ಬಂದಿ ಎಚ್ಚೆತ್ತು ನಿರ್ಲಕ್ಷ್ಯ ವಹಿಸುವುದನ್ನು ಕಡಿಮೆ ಮಾಡಿ ಜನರ ಬದುಕಿಗೆ ಆಸರೆಯಾಗಬೇಕು ಎಂಬುವುದು ಜನರ ಆಗ್ರಹವಾಗಿದೆ.