ಮಾಸ್ಕೊ: ದೇಶವು ಸಂವಾದ ಹಾಗೂ ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು, ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಹೇಳಿದ್ದಾರೆ.
ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಜತೆ ಮಂಗಳವಾರ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿ ಮಾತನಾಡಿದ್ದರು. ಜಾಗತಿಕ ಮಟ್ಟದಲ್ಲಿ ಹಲವು ರೀತಿಯ ಪರಿಣಾಮ ಬೀರಿರುವ ರಷ್ಯಾ-ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಸಾಧ್ಯವಿರುವ ಎಲ್ಲ ನೆರವಿನ ಸಹಕಾರ ನೀಡಲು ಭಾರತ ಸಿದ್ಧವಿದೆ ಎಂದು ಕೂಡ ಆ ವೇಳೆ ಹೇಳಿದ್ದರು.
ಜಗತ್ತು ಉಗ್ರವಾದ, ಹವಾಮಾನ ಬದಲಾವಣೆ, ಆರ್ಥಿಕ ಅನಿಶ್ಚಿತತೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇವುಗಳಿಂದ ಹೊರಬರಲು ಬ್ರಿಕ್ಸ್ ಸಭೆಯು ಸಹಕಾರಿಯಾಗಲಿ ಎಂದು ಭಾವಿಸಿದ್ದೇನೆ. ಭವಿಷ್ಯದ ಪೀಳಿಗೆಗೆ ಉತ್ತಮ ಅವಕಾಶಗಳನ್ನು ಒದಗಿಸಬೇಕಿದೆ. ಜಾಗತೀಕ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಈ ಸಂದರ್ಭಗಳನ್ನು ಕೋವಿಡ್ ಮಾದರಿಯಲ್ಲಿ ಒಟ್ಟಾಗಿ ಹೋರಾಡಿ ಪಾರಾಗಬೇಕು ಎಂದಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿ ಅವರು ಯುದ್ಧ ಕೊನೆಗಾಣಿಸುವಂತೆ ಪುಟಿನ್ ಅವರ ಮೇಲೆ ಪರೋಕ್ಷವಾಗಿ ಒತ್ತಡ ಹೇರಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಲ್ಲಿ ಶಾಂತಿ, ಸ್ಥಿರತೆ ಕಾಪಾಡಲು ಭಾರತ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತದೆ. ಸಂಘರ್ಷಪೀಡಿತ ಉಭಯ ದೇಶಗಳ ಮುಖ್ಯಸ್ಥರ ಜತೆ ಭಾರತ ನಿರಂತರವಾಗಿ ಸಂಪರ್ಕದಲ್ಲಿದೆ. ಯುದ್ಧಗಳಿಂದ ಎಂದಿಗೂ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.