ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ಮೂರು ದಿನಗಳ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಮಧ್ಯೆ ಈ ಎರಡೂ ದೇಶಗಳ ಮಹಿಳೆಯರ ತಂಡಗಳ ಮಧ್ಯೆ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಈ ತಿಂಗಳ ಅಂತ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಸಾಕಷ್ಟು ಊಹಪೋಹಗಳ ನಂತರ ಹರ್ಮನ್‌ಪ್ರೀತ್ ಕೌರ್ ಅವರನ್ನು ತಂಡದ ನಾಯಕಿಯಾಗಿಯೇ ಮುಂದುವರೆಸಲಾಗಿದೆ.
ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಗುಂಪು ಹಂತದಲ್ಲೇ ತನ್ನ ಪ್ರಯಾಣ ಮುಗಿಸಿತ್ತು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಭಾರತ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಹೀಗಾಗಿ ಹಲವು ಆಟಗಾರ್ತಿಯರನ್ನು ಹೊರ ಹಾಕಬೇಕು ಎಂಬ ಕೂಗು ಎದ್ದಿತ್ತು. ಈ ಮಧ್ಯೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಪರಿಗಣಿಸಿ ಹರ್ಮನ್‌ಪ್ರೀತ್ ಅವರನ್ನು ನಾಯಕಿಯಾಗಿ ಉಳಿಸಿಕೊಂಡಿದ್ದು, ಅವರೇ ಏಕದಿನ ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಈ ಸರಣಿಗೂ ಟಿ20 ವಿಶ್ವಕಪ್‌ನ ಭಾಗವಾಗಿದ್ದ ಹೆಚ್ಚಿನ ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಈ ಸರಣಿಯಿಂದ ಸ್ಟಾರ್ ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, 12ನೇ ತರಗತಿಯ ಬೋರ್ಡ್ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಯುವ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ರನ್ನು ಸರಣಿಯಿಂದ ಕೈ ಬಿಡಲಾಗಿದೆ.
ಈ ಸರಣಿಯಲ್ಲಿ ರಿಚಾ ಬದಲಿಗೆ ಯಾಸ್ತಿಕಾ ಭಾಟಿಯಾ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಉಮಾ ಛೆಟ್ರಿ ಕೂಡ ಸರಣಿಗೆ ಆಯ್ಕೆಯಾಗಿದ್ದಾರೆ. ಬ್ಯಾಟರ್ಗಳಾದ ದಯಾಲನ್ ಹೇಮಲತಾ, ಸೈಮಾ ಠಾಕೋರ್, ತೇಜಲ್ ಹಸನ್‌ಬಿಸ್ ಮತ್ತು ಸಯಾಲಿ ಸತ್ಗರೆ ಕೂಡ ತಂಡ ಸೇರಿದ್ದಾರೆ.
ಅಕ್ಟೋಬರ್ 24 ರಿಂದ 3 ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದ್ದು, ಇದಕ್ಕಾಗಿ ಕಿವೀಸ್ ತಂಡ ಯುಎಇಯಿಂದ ನೇರವಾಗಿ ಭಾರತಕ್ಕೆ ಬರಲಿದೆ. ಭಾರತ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ಸಯಾಲಿ ಸತ್ಗರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ತೇಜಲ್ ಹಸನ್ಬಿಸ್, ಸೈಮಾ ಠಾಕೋರ್, ಪ್ರಿಯಾ ಮಿಶ್ರಾ, ರಾಧಾ ಯಾದವ್ ಮತ್ತು ಶ್ರೇಯಾಂಕಾ ಪಾಟೀಲ್ ಸ್ಥಾನ ಪಡೆದಿದ್ದಾರೆ.