ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗ ಮುಂದೂಡಿದೆ. ಅಲ್ಲದೇ, ಪವಿತ್ರಾ ಸೇರಿದಂತೆ ಇನ್ನಿತರ ಕೆಲವು ಆರೋಪಿಗಳ ಜಾಮೀನು ಅರ್ಜಿ ಆದೇಶವನ್ನು ಅ. 14ಕ್ಕೆ ಮುಂದೂಡಲಾಗಿದೆ.
ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ದರ್ಶನ್ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಪವಿತ್ರಾಗೌಡ ಅರ್ಜಿ ಸೇರಿದಂತೆ ಇನ್ನಿತರ ಐವರು ಆರೋಪಿಗಳ ಜಾಮೀನು ಅರ್ಜಿಯ ಆದೇಶವನ್ನು ಕೋರ್ಟ್ ಅ. 14ಕ್ಕೆ ಮುಂದೂಡಿದೆ.
ವಾದ ಮಂಡಿಸಿದ್ದ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್, ಪೊಲೀಸರ ತನಿಖೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ವಾದಿಸಿದ್ದರು. ತನಿಖೆಯಲ್ಲಿ ಸತತವಾಗಿ ತಪ್ಪುಗಳನ್ನು ಮಾಡಿದ್ದಾರೆ ಎಂದಿದ್ದರು. ವಾದಕ್ಕೆ ಪ್ರತಿವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ನಿನ್ನೆ ಮಂಡಿಸಿದ ವಾದದಲ್ಲಿ ನಾಗೇಶ್ ಅವರು ಎತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ರೇಣುಕಾ ಸ್ವಾಮಿಯನ್ನು ಹೇಗೆ ಆರೋಪಿಗಳು ಟ್ರ್ಯಾಪ್ ಮಾಡಿದರು. ಹೇಗೆ ಆತನನ್ನು ಅಪಹರಣ ಮಾಡಿದರು ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಹೇಗೆ ರೇಣುಕಾ ಸ್ವಾಮಿ ಮೇಲೆ ಕ್ರೂರತೆ ಮೆರೆದರು ಎಂದು ನ್ಯಾಯಾಲಯದ ಮುಂದೆ ಹೇಳಿದರು.
ಅಲ್ಲದೇ, ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8, ಎ11, ಎ12 ಅವರು ಅಪಹರಣ ಹಾಗೂ ಕೊಲೆಯಲ್ಲಿ ಶಾಮೀಲಾಗಿರುವ ಕಾರಣ ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಎ8 ಆರೋಪಿ ಕಾರು ಚಾಲಕ ರವಿಶಂಕರ್ ಬಟ್ಟೆಯ ಮೇಲೆ ರಕ್ತದ ಕಲೆ ಪತ್ತೆ ಆಗಿರುವ ಕಾರಣ ಆತನಿಗೂ ಜಾಮೀನು ನೀಡಬಾರದು ಎಂದು ವಾದ ಮಾಡಿದರು.
ಎಸ್ ಪಿಪಿ ಪ್ರಸನ್ನ ಕುಮಾರ್ ವಾದಕ್ಕೆ ಪ್ರತಿವಾದ ಸಲ್ಲಿಸಲು ಸಿವಿ ನಾಗೇಶ್ ಅವರಿಗೆ ಅವಕಾಶ ನೀಡಲಾಯಿತು. ಆದರೆ, ಅವರು ಅ. 10ರಂದು ವಾದಿ ಮಂಡಿಸುವುದಾಗಿ ಹೇಳಿದರು. ಹೀಗಾಗಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಯಿತು. ಅಲ್ಲದೇ, ಎ1 ಪವಿತ್ರಾ, ಎ8, ಎ11, ಎ12 ಹಾಗೂ ಎ13 ಅವರುಗಳ ಜಾಮೀನು ಅರ್ಜಿಯ ಕುರಿತಾದ ಆದೇಶವನ್ನು ಅ. 14 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.


















