ಚೆನ್ನೈ: ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ, ಕನಸುಗಳನ್ನು ನನಸು ಮಾಡಿಕೊಳ್ಳಲು ಅದೊಂದು ಅಡ್ಡಿಯಲ್ಲ ಎಂಬುದನ್ನು ತಮಿಳುನಾಡಿನ 88 ವರ್ಷದ ರೈತರೊಬ್ಬರು ನಿರೂಪಿಸಿದ್ದಾರೆ. ತಮ್ಮ ಬಾಲ್ಯದ ಕನಸಾಗಿದ್ದ ಮರ್ಸಿಡಿಸ್ ಬೆಂಝ್ ಕಾರನ್ನು, ತಮ್ಮ 88ನೇ ವಯಸ್ಸಿನಲ್ಲಿ ಖರೀದಿಸುವ ಮೂಲಕ, ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
2018ರಲ್ಲಿ ನಡೆದ ಈ ಘಟನೆಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ರೈತರಾದ ಎಚ್. ದೇವರಾಜನ್ ಅವರು, ತಮ್ಮ 8ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ನೋಡಿದ್ದರು. ಆ ಕಾರಿನ ಬ್ರಾಂಡ್ ಅಥವಾ ಮಾಡೆಲ್ ಯಾವುದು ಎಂದು ಅವರಿಗೆ ತಿಳಿದಿರಲಿಲ್ಲ. ಆದರೆ, ಅದರ ಮುಂಭಾಗದಲ್ಲಿದ್ದ ‘ಮೂರು-ಬಿಂದುಗಳ ನಕ್ಷತ್ರ’ದ ಲೋಗೋ (Three-Pointed Star Logo) ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು.
ಅಂದೇ, ತಾನೂ ಒಂದು ದಿನ ಈ ಕಾರನ್ನು ಖರೀದಿಸಬೇಕೆಂದು ಸಂಕಲ್ಪ ಮಾಡಿಕೊಂಡಿದ್ದ ದೇವರಾಜನ್, ಅದಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಸುಮಾರು 80 ವರ್ಷಗಳ ಕಠಿಣ ಪರಿಶ್ರಮದ ನಂತರ, ಅವರು ತಮ್ಮ 88ನೇ ವಯಸ್ಸಿನಲ್ಲಿ ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ (Mercedes-Benz B-Class) ಕಾರನ್ನು ಖರೀದಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು. ಈ ಕಾರಿನ ಅಂದಿನ ಎಕ್ಸ್-ಶೋರೂಂ ಬೆಲೆ ಸುಮಾರು 32 ಲಕ್ಷ ರೂಪಾಯಿ .
ಈ ಅಪೂರ್ವ ಸಾಧನೆಯನ್ನು, ಕಾರು ಡೀಲರ್‌ಶಿಪ್‌ನವರು ಕೂಡ ಸಂಭ್ರಮಿಸಿದರು. ದೇವರಾಜನ್ ಅವರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿ, ಕೇಕ್ ಕತ್ತರಿಸಿ, ಅವರ ಜೀವನದ ಈ ಮಹತ್ವದ ಕ್ಷಣವನ್ನು ಆಚರಿಸಿದರು. ಈ ಸಂದರ್ಭದಲ್ಲಿ, ದೇವರಾಜನ್ ಅವರು ತಮ್ಮ ಜೀವನದ ಪ್ರತಿ ಹಂತದಲ್ಲೂ ತನಗೆ ಬೆಂಬಲವಾಗಿ ನಿಂತ ತಮ್ಮ ಪತ್ನಿಗೆ ಕೃತಜ್ಞತೆ ಸಲ್ಲಿಸಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ. ಈ ಸ್ಫೂರ್ತಿದಾಯಕ ಕಥೆಯು, ಛಲವೊಂದಿದ್ದರೆ, ಯಾವುದೇ ವಯಸ್ಸಿನಲ್ಲಿಯೂ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.