ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ನಗರದ ಹೊರವಲಯದಲ್ಲಿರುವ ಹಾರ್ನ್ಸ್‌ಬಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 33 ವರ್ಷದ ಐಟಿ ವಿಶ್ಲೇಷಕಿ ಸಮನ್ವಿತಾ ಧಾರೇಶ್ವರ ಮೃತಪಟ್ಟ ದುರ್ದೈವಿ. ಆಸ್ಟ್ರೇಲಿಯಾದ 19 ವರ್ಷದ ಯುವಕನೊಬ್ಬ ಅತಿವೇಗವಾಗಿ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಸಮನ್ವಿತಾ ಅವರು ತಮ್ಮ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ಪಾರ್ಕಿಂಗ್ ಗ್ಯಾರೇಜ್‌ನ ಪ್ರವೇಶ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಅವರ ಕುಟುಂಬವು ರಸ್ತೆ ದಾಟಲು ಅನುಕೂಲವಾಗುವಂತೆ ಕಿಯಾ ಕಾರೊಂದು ವೇಗವನ್ನು ಕಡಿಮೆ ಮಾಡಿತ್ತು. ಆದರೆ, ಹಿಂಬದಿಯಿಂದ ಅತಿವೇಗವಾಗಿ ಬಂದ ಆರನ್ ಪಾಪಾಜೊಗ್ಲು ಎಂಬ 19 ವರ್ಷದ ಯುವಕ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು, ಕಿಯಾ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮುಂದಕ್ಕೆ ನುಗ್ಗಿದ ಕಿಯಾ ಕಾರು, ರಸ್ತೆ ದಾಟುತ್ತಿದ್ದ ಸಮನ್ವಿತಾ ಅವರಿಗೆ ಬಲವಾಗಿ ಅಪ್ಪಳಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ವೆಸ್ಟ್‌ಮೀಡ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಹಾಗೂ ಅವರ ಗರ್ಭದಲ್ಲಿದ್ದ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಸಮನ್ವಿತಾ ಕುಟುಂಬದಲ್ಲಿ ಈ ಘಟನೆ ದೊಡ್ಡ ಆಘಾತವನ್ನುಂಟುಮಾಡಿದೆ.
ಆರೋಪಿ ಯುವಕನ ಬಂಧನ
ಘಟನೆಯ ನಂತರ ಆರೋಪಿ ಆರನ್ ಪಾಪಾಜೊಗ್ಲುನನ್ನು ಆತನ ವಹ್ರೂಂಗಾ ಮನೆಯಲ್ಲಿ ಬಂಧಿಸಲಾಗಿದೆ. ಸಾವಿಗೆ ಕಾರಣವಾದ ಅಪಾಯಕಾರಿ ಚಾಲನೆ, ನಿರ್ಲಕ್ಷ್ಯದ ಚಾಲನೆ ಮತ್ತು ಗರ್ಭದಲ್ಲಿದ್ದ ಶಿಶುವಿನ ಸಾವಿಗೆ ಕಾರಣವಾದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗೆ ಜಾಮೀನು ನಿರಾಕರಿಸಿದೆ.
ನ್ಯೂ ಸೌತ್ ವೇಲ್ಸ್‌ನಲ್ಲಿ 2022ರಲ್ಲಿ ಜಾರಿಗೆ ತಂದ “ಝೋಯಿ ಕಾನೂನು” (Zoe’s Law) ಪ್ರಕಾರ, ಗರ್ಭದಲ್ಲಿನ ಶಿಶುವಿನ ಸಾವಿಗೆ ಕಾರಣವಾಗುವ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ, ಆರೋಪಿಗೆ ಹೆಚ್ಚುವರಿಯಾಗಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಸಮನ್ವಿತಾ ಧಾರೇಶ್ವರ ಅವರು ‘ಅಲ್ಸ್ಕೊ ಯೂನಿಫಾರ್ಮ್ಸ್’ ಎಂಬ ಕಂಪನಿಯಲ್ಲಿ ಅರ್ಹ ಐಟಿ ಸಿಸ್ಟಮ್ಸ್ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಸಾರ್ವಜನಿಕರು ಹೂವುಗಳು ಮತ್ತು ಶ್ರದ್ಧಾಂಜಲಿಯ ಸಂದೇಶಗಳನ್ನು ಇಟ್ಟು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತದ ನಂತರ ಸಮನ್ವಿತಾ ಅವರ ಅಂತಿಮ ಕ್ಷಣಗಳಲ್ಲಿ ಅವರ ಜೊತೆಗಿದ್ದ “ಲಾರಾ” ಎಂಬ ಮಹಿಳೆ, “ನಮಗೆ ಪರಿಚಯವಿಲ್ಲದಿದ್ದರೂ, ನಿಮ್ಮ ಆ ಅಂತಿಮ ಕ್ಷಣಗಳಲ್ಲಿ ನಿಮ್ಮೊಂದಿಗೆ ಇರುವುದು ನನ್ನ ಸೌಭಾಗ್ಯ” ಎಂದು ಭಾವನಾತ್ಮಕವಾಗಿ ಬರೆದು ಕಾರ್ಡ್ ಒಂದನ್ನು ಸ್ಥಳದಲ್ಲಿ ಇರಿಸಿದ್ದಾರೆ.
ಇದನ್ನೂ ಓದಿ : ಕೋಟ್ಯಾಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್ಗೆ ಮತ್ತೆ ಬೀಗ ಜಡಿದ ಅಧಿಕಾರಿಗಳು!



















