ವಿಜಯವಾಡ: 26 ದಾಳಿಗಳ ಸೂತ್ರದಾರ, ನಕ್ಸಲ್ ಕಮಾಂಡರ್ ಮದ್ವಿ ಹಿಡ್ಮಾನನ್ನು ಹತ್ಯೆಗೈದ ಒಂದೇ ದಿನದಲ್ಲಿ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು (ಎಎಸ್‌ಆರ್) ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬುಧವಾರ ಮತ್ತೊಂದು ಭೀಕರ ಎನ್‌ಕೌಂಟರ್ ನಡೆದಿದೆ. ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಈ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ವಿಜಯವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಂಧ್ರಪ್ರದೇಶದ ಗುಪ್ತಚರ ವಿಭಾಗದ ಎಡಿಜಿ ಮಹೇಶ್ ಚಂದ್ರ ಲಡ್ಡಾ, “ಮಂಗಳವಾರ ನಡೆದ ಹಿಡ್ಮಾ ಎನ್‌ಕೌಂಟರ್‌ನ ಮುಂದುವರಿದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಾಹಿತಿಯ ಪ್ರಕಾರ, ಇದುವರೆಗೆ 7 ನಕ್ಸಲರು ಮೃತಪಟ್ಟಿದ್ದಾರೆ,” ಎಂದು ತಿಳಿಸಿದರು. ಮೃತರಲ್ಲಿ ಮೂವರು ಮಹಿಳೆಯರೂ ಸೇರಿದ್ದು, ಅವರ ಗುರುತು ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಪ್ರಮುಖ ನಾಯಕನ ಗುರುತು ಪತ್ತೆ
ಮೃತರಲ್ಲಿ ಒಬ್ಬನನ್ನು ಶ್ರೀಕಾಕುಳಂ ಮೂಲದ ಮೆಟುರಿ ಜೋಖಾ ರಾವ್ ಅಲಿಯಾಸ್ ‘ಟೆಕ್’ ಶಂಕರ್ ಎಂದು ಗುರುತಿಸಲಾಗಿದೆ. ಈತ ಆಂಧ್ರ-ಒಡಿಶಾ ಗಡಿ (ಎಒಬಿ) ವಲಯದ ಏರಿಯಾ ಕಮಿಟಿ ಸದಸ್ಯನಾಗಿ (ಎಸಿಎಂ) ಕಾರ್ಯನಿರ್ವಹಿಸುತ್ತಿದ್ದ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಂಕರ್ ತಾಂತ್ರಿಕ ಕಾರ್ಯಾಚರಣೆ, ಶಸ್ತ್ರಾಸ್ತ್ರ ತಯಾರಿಕೆ ಮತ್ತು ಸಂವಹನದಲ್ಲಿ ಪರಿಣತಿ ಹೊಂದಿದ್ದ.
ಛತ್ತೀಸ್‌ಗಢದಿಂದ ಮಾವೋವಾದಿಗಳ ಚಲನವಲನ
ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಮತ್ತು ಇತರ ಐವರನ್ನು ಹತ್ಯೆಗೈದ ನಂತರ ಸಂಗ್ರಹಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಸರಣಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಲಡ್ಡಾ ವಿವರಿಸಿದರು. ಛತ್ತೀಸ್‌ಗಢದಿಂದ ಮಾವೋವಾದಿಗಳ ಚಲನವಲನವನ್ನು ಪೊಲೀಸರು ನಿರಂತರವಾಗಿ ಗಮನಿಸುತ್ತಿದ್ದು, ಅವರ ಚಟುವಟಿಕೆಗಳು ಮತ್ತು ಅಡಗುತಾಣಗಳನ್ನು ಪತ್ತೆಹಚ್ಚಿದ ನಂತರ ಈ ಇತ್ತೀಚಿನ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಇತಿಹಾಸದಲ್ಲೇ ಅತಿದೊಡ್ಡ ಬಂಧನ
ಇದೇ ವೇಳೆ, ಎನ್‌ಟಿಆರ್, ಕೃಷ್ಣಾ, ಕಾಕಿನಾಡ, ಕೋನಸೀಮಾ ಮತ್ತು ಏಲೂರು ಜಿಲ್ಲೆಗಳಲ್ಲಿ ಒಟ್ಟು 50 ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಲಡ್ಡಾ ಮಾಹಿತಿ ನೀಡಿದರು. ಇದು ಆಂಧ್ರಪ್ರದೇಶದ ಇತಿಹಾಸದಲ್ಲೇ ಅತಿ ದೊಡ್ಡ ಸಂಖ್ಯೆಯ ನಕ್ಸಲರ ಬಂಧನವಾಗಿದೆ. ಬಂಧಿತರಿಂದ 45 ಶಸ್ತ್ರಾಸ್ತ್ರಗಳು, 272 ಸುತ್ತು ಗುಂಡುಗಳು, ಎರಡು ಮ್ಯಾಗಜಿನ್‌ಗಳು, 750 ಗ್ರಾಂ ತಂತಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.
ಇದನ್ನೂ ಓದಿ : ದೆಹಲಿ ಸ್ಫೋಟ | ಕೆಂಪುಕೋಟೆ ಕಾರ್ ಪಾರ್ಕಿಂಗ್‌ನಲ್ಲೇ ಬಾಂಬ್ ಜೋಡಿಸಿದ್ದ ಉಗ್ರ!



















