ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸಿ 6 ತಿಂಗಳು ಕಳೆಯುವುದರೊಳಗೆ, ಪಾಕ್ ಮೂಲದ ಉಗ್ರ ಸಂಘಟನೆಗಳು ಜಮ್ಮು- ಕಾಶ್ಮೀರದಲ್ಲಿ ಮತ್ತೊಂದು ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸಿದೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ಸಂಘಟಿತ ದಾಳಿ ನಡೆಸಲು ಸಜ್ಜಾಗುತ್ತಿವೆ ಎಂದು ಹೊಸ ಗುಪ್ತಚರ ವರದಿಗಳು ಎಚ್ಚರಿಸಿವೆ.
ಸೆಪ್ಟೆಂಬರ್‌ನಿಂದೀಚೆಗೆ ಉಗ್ರ ಸಂಘಟನೆಗಳು ಗಡಿ ನಿಯಂತ್ರಣ ರೇಖೆಯ ಮೂಲಕ ನುಸುಳುಕೋರತನ, ಗಡಿ ಭಾಗದ ಸಮೀಕ್ಷೆ ಮತ್ತು ಶಸ್ತ್ರಾಸ್ತ್ರ ಸಾಗಾಟವನ್ನು ತೀವ್ರಗೊಳಿಸಿವೆ. ಪಾಕಿಸ್ತಾನದ ವಿಶೇಷ ಸೇವಾ ಗುಂಪು (SSG) ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ (ISI) ಸಹಾಯದಿಂದ ಲಷ್ಕರ್ ಹಾಗೂ ಜೈಶ್‌ನ ಹಲವು ಘಟಕಗಳು ಈಗಾಗಲೇ ಕಣಿವೆ ರಾಜ್ಯವನ್ನು ಪ್ರವೇಶಿಸಿವೆ ಎಂದು ಗುಪ್ತಚರ ವರದಿ ಹೇಳಿದೆ.

ಮೂಲಗಳ ಪ್ರಕಾರ, ಲಷ್ಕರ್ ಉಗ್ರ ಶಂಶೇರ್ ನೇತೃತ್ವದ ಘಟಕವೊಂದು ಡ್ರೋನ್‌ಗಳನ್ನು ಬಳಸಿ ಗಡಿ ನಿಯಂತ್ರಣ ರೇಖೆಯ ದುರ್ಬಲ ಪ್ರದೇಶಗಳನ್ನು ಗುರುತಿಸಿದೆ. ಮುಂಬರುವ ವಾರಗಳಲ್ಲಿ ಫಿದಾಯೀನ್ ಮಾದರಿಯ ದಾಳಿಗಳು ಅಥವಾ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಬೀಳಿಸುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡಗಳನ್ನು (ಬ್ಯಾಟ್) ಮರು ನಿಯೋಜಿಸಲಾಗಿದೆ. ಈ ತಂಡಗಳಲ್ಲಿ ಪಾಕ್ ಸೇನೆಯ ಮಾಜಿ ಸೈನಿಕರು ಮತ್ತು ಉಗ್ರರು ಇರುವುದು ಭಾರತೀಯ ಸೇನಾ ನೆಲೆಗಳ ಮೇಲೆ ಗಡಿಯಾಚೆಗಿನ ದಾಳಿಯ ಸಂಕೇತ ನೀಡಿದೆ. ‘ಆಪರೇಷನ್ ಸಿಂದೂರ’ದ ನಂತರ ಪಾಕಿಸ್ತಾನವು ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ರೂಪಿಸಿರುವ ಹೊಸ ಕಾರ್ಯತಂತ್ರ ಇದಾಗಿದೆ.
ಅಕ್ಟೋಬರ್ 2025ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಉನ್ನತ ಮಟ್ಟದ ಸಭೆಗಳಲ್ಲಿ ಜಮಾತ್-ಎ-ಇಸ್ಲಾಮಿ, ಹಿಜ್ಬುಲ್ ಮುಜಾಹಿದೀನ್ ಮತ್ತು ಐಎಸ್‌ಐ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಗಳಲ್ಲಿ, ನಿಷ್ಕ್ರಿಯಗೊಂಡಿದ್ದ ಉಗ್ರರ ಘಟಕಗಳನ್ನು ಪುನಶ್ಚೇತನಗೊಳಿಸಲು, ಮಾಜಿ ಕಮಾಂಡರ್‌ಗಳಿಗೆ ಮಾಸಿಕ ವೇತನ ನೀಡಲು ಮತ್ತು ‘ಆಪರೇಷನ್ ಸಿಂದೂರ’ದಲ್ಲಿ ಆದ ನಷ್ಟಕ್ಕೆ ಸೇಡು ತೀರಿಸಿಕೊಳ್ಳಲು ದಾಳಿಗಳನ್ನು ತೀವ್ರಗೊಳಿಸಲು ಐಎಸ್‌ಐ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ಲಷ್ಕರ್ ಉಗ್ರರು ಕಾಶ್ಮೀರ ಕಣಿವೆಯಲ್ಲಿ ಸ್ಥಳೀಯ ಸಹಾನುಭೂತಿ ಹೊಂದಿರುವವರ ಮತ್ತು ತಮ್ಮ ಸಂಪರ್ಕ ಜಾಲವನ್ನು ಪುನಶ್ಚೇತನಗೊಳಿಸುತ್ತಿದ್ದಾರೆ. ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಮಾದಕವಸ್ತು ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾರ್ಗಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು -ಕಾಶ್ಮೀರದಲ್ಲಿ ಸ್ಥಳೀಯ ಚುನಾವಣೆಗಳು ಹಾಗೂ ಪ್ರವಾಸೋದ್ಯಮ ಚೇತರಿಕೆಯಿಂದಾಗಿ ಶಾಂತಿ ನೆಲೆಸುತ್ತಿರುವ ಈ ಸಮಯದಲ್ಲಿ, ಈ ಪ್ರಗತಿಯನ್ನು ಹಳಿತಪ್ಪಿಸಲು ಐಎಸ್‌ಐ ಬೆಂಬಲಿತ ಉಗ್ರರು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಈ ನಡೆ “ಗಂಭೀರ ಎಚ್ಚರಿಕೆ” ಎಂದು ಅಧಿಕಾರಿಗಳು ತಿಳಿಸಿದ್ದು, ಉತ್ತರ ಕಮಾಂಡ್‌ನಾದ್ಯಂತ ಭಾರತೀಯ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ.
ಇದನ್ನೂ ಓದಿ : 5 ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನ ಬಂಧನ | 22.5 ಲಕ್ಷ ಮೌಲ್ಯದ ಚಿನ್ನಾಭರಣ ವಶ



















