ಗುವಾಹಟಿ: ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭಾರೀ ರೈಲು ಅಪಘಾತದಲ್ಲಿ ಎಂಟು ಆನೆಗಳು ಮೃತಪಟ್ಟಿವೆ. ಮಿಜೋರಾಂನ ಸೈರಾಂಗ್‌ನಿಂದ ದೆಹಲಿಯ ಆನಂದ ವಿಹಾರ್‌ಗೆ ತೆರಳುತ್ತಿದ್ದ ಸೈರಾಂಗ್–ನ್ಯೂ ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು, ಅರಣ್ಯ ಪ್ರದೇಶದ ಸಮೀಪದ ಹಾದಿಯಲ್ಲಿ ಆನೆಗಳ ಗುಂಪಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಬೆಳಗಿನ ಜಾವ ಸುಮಾರು 2.17ರ ಸುಮಾರಿಗೆ ಈ ಘಟನೆ ನಡೆದಿದೆ. ಆನೆಗಳ ಹಿಂಡು ರೈಲು ಹಳಿಗಳನ್ನು ದಾಟುತ್ತಿದ್ದ ವೇಳೆ ಚಾಲಕ ತುರ್ತು ಬ್ರೇಕ್ ಹಾಕಿದರೂ ರೈಲು ಅವುಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿನ ಎಂಜಿನ್ ಹಾಗೂ ಐದು ಬೋಗಿಗಳು ಹಳಿಯಿಂದ ತಪ್ಪಿವೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಮರಿ ಆನೆ ಉಳಿದಿದೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆ ಸ್ಥಳವು ಅಧಿಕೃತವಾಗಿ ಗುರುತಿಸಲಾಗದ ಆನೆ ಮಾರ್ಗದಲ್ಲಿದೆ. ಅಪಘಾತದ ನಂತರ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಮೇಲ್ಅಸ್ಸಾಂ ಮತ್ತು ಈಶಾನ್ಯ ಭಾಗಗಳಿಗೆ ತೆರಳಬೇಕಿದ್ದ ಹಲವು ರೈಲುಗಳ ಸಂಚಾರ ವಿಳಂಬವಾಗಿವೆ. ಹಳಿ ತಪ್ಪಿದ ಬೋಗಿಗಳ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ, ಗುವಾಹಟಿಗೆ ತಲುಪಿದ ನಂತರ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಯಿತು ಎಂದು ರೈಲ್ವೆ ಮೂಲಗಳು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ರೈಲು ಅಪಘಾತಗಳಿಂದ ಒಟ್ಟು 79 ಆನೆಗಳು ಸಾವನ್ನಪ್ಪಿರುವುದಾಗಿ ಕೇಂದ್ರೀಯ ಪರಿಸರ ಸಚಿವ (ರಾಜ್ಯ) ಕೀರ್ತಿ ವರ್ಧನ್ ಸಿಂಗ್ ಅವರು ಆಗಸ್ಟ್ ತಿಂಗಳಲ್ಲಿ ಲೋಕಸಭೆಗೆ ತಿಳಿಸಿದ್ದರು. 2020-21ರಿಂದ 2024-25ರ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಈ ಅಂಕಿ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆನೆಗಳ ಸಾವನ್ನು ತಡೆಗಟ್ಟಲು ಪರಿಸರ ಹಾಗೂ ರೈಲ್ವೆ ಇಲಾಖೆಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಮುಖ್ಯವಾಗಿ ಆನೆಗಳ ಚಲನವಲನ ಇರುವ ಪ್ರದೇಶಗಳಲ್ಲಿ ರೈಲುಗಳ ವೇಗಕ್ಕೆ ಮಿತಿ ವಿಧಿಸುವುದು, ಕಂಪನ ಸಂವೇದಕ ಆಧರಿತ ಎಚ್ಚರಿಕಾ ವ್ಯವಸ್ಥೆ, ಅಂಡರ್‌ಪಾಸ್‌ಗಳು, ಬೇಲಿಯ ನಿರ್ಮಾಣ ಮುಂತಾದ ಕಾರ್ಯಗಳು ಪ್ರಗತಿಯಲ್ಲಿವೆ.
ಇದನ್ನೂ ಓದಿ: ಪ್ರಧಾನಿ ಮೋದಿ ಅಸ್ಸಾಂ ಪ್ರವಾಸ : ಇಂದು ಅಸ್ಸಾಂನಲ್ಲಿ ಭಾರತದ ಮೊದಲ ಪ್ರಕೃತಿ ಆಧಾರಿತ ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟನೆ


















