ಬಮಾಕೋ: ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಮಾಲಿಯಲ್ಲಿ ವಿದ್ಯುದೀಕರಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ಭಾರತೀಯರನ್ನು ಉಗ್ರರು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಖಚಿತಪಡಿಸಿದ್ದಾರೆ. ದೇಶವು ಅಲ್-ಖೈದಾ ಮತ್ತು ಐಸಿಸ್-ಸಂಯೋಜಿತ ಭಯೋತ್ಪಾದಕ ಗುಂಪುಗಳ ಹಿಂಸಾಚಾರ ಮತ್ತು ತೀವ್ರಗೊಳ್ಳುತ್ತಿರುವ ಅಸ್ಥಿರತೆಯಿಂದ ತತ್ತರಿಸುತ್ತಿರುವಾಗಲೇ ಈ ಘಟನೆ ನಡೆದಿದೆ.
ಪಶ್ಚಿಮ ಮಾಲಿಯ ಕೋಬ್ರಿ ಬಳಿ ಗುರುವಾರ ಶಸ್ತ್ರಸಜ್ಜಿತ ವ್ಯಕ್ತಿಗಳು ಭಾರತೀಯರನ್ನು ಅಪಹರಿಸಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. “ಐವರು ಭಾರತೀಯ ಪ್ರಜೆಗಳ ಅಪಹರಣವನ್ನು ನಾವು ಖಚಿತಪಡಿಸುತ್ತೇವೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಭಾರತೀಯರನ್ನು ರಾಜಧಾನಿ ಬಮಾಕೊಗೆ ಸ್ಥಳಾಂತರಿಸಲಾಗಿದೆ” ಎಂದು ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಈ ಅಪಹರಣದ ಹೊಣೆಯನ್ನು ಇನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ಸೇನಾ ಆಡಳಿತದಲ್ಲಿರುವ ಮಾಲಿಯು ಹಲವು ವರ್ಷಗಳಿಂದ ಅಸ್ಥಿರತೆ ಮತ್ತು ಉಗ್ರಗಾಮಿ ಹಿಂಸಾಚಾರವನ್ನು ಎದುರಿಸುತ್ತಿದೆ. ಅಲ್-ಖೈದಾ-ಸಂಯೋಜಿತ ‘ಗ್ರೂಪ್ ಫಾರ್ ದಿ ಸಪೋರ್ಟ್ ಆಫ್ ಇಸ್ಲಾಂ ಅಂಡ್ ಮುಸ್ಲಿಮ್ಸ್’ (JNIM) ಇತ್ತೀಚೆಗೆ ಇಂಧನ ದಿಗ್ಬಂಧನವನ್ನು ಬಿಗಿಗೊಳಿಸಿದ್ದು, ಈಗಾಗಲೇ ತೀವ್ರವಾಗಿರುವ ಆರ್ಥಿಕ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ. 2012ರಿಂದೀಚೆಗೆ, ಮಾಲಿಯಲ್ಲಿ ವಿದೇಶಿ ಪ್ರಜೆಗಳ ಅಪಹರಣಗಳು ಸಾಮಾನ್ಯವಾಗಿದ್ದು, ಸರ್ಕಾರದ ನಿಯಂತ್ರಣ ಕುಸಿದಿದೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಇದೇ ಉಗ್ರ ಸಂಘಟನೆಯು ಇಬ್ಬರು ಎಮಿರಾಟಿ ಪ್ರಜೆಗಳನ್ನು ಮತ್ತು ಒಬ್ಬ ಇರಾನಿಯನನ್ನು ಅಪಹರಿಸಿತ್ತು. ವರದಿಗಳ ಪ್ರಕಾರ, ಸುಮಾರು 50 ಮಿಲಿಯನ್ ಅಮೆರಿಕನ್ ಡಾಲರ್ ಸುಲಿಗೆ ಹಣ ಪಾವತಿಸಿದ ನಂತರ ಅವರನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು.
2012ರಲ್ಲಿ ಪ್ರಾರಂಭವಾದ ಈ ಉಗ್ರರ ಸಂಘಟನೆಯು ತನ್ನ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ನೆರೆಯ ಬುರ್ಕಿನಾ ಫಾಸೊ ಮತ್ತು ನೈಜರ್‌ಗೂ ಹರಡಿದೆ. ಮಾಲಿಯ ಸೇನಾ ನಾಯಕ ಅಸ್ಸಿಮಿ ಗೋಯಿಟಾ ಅವರು ಬಂಡುಕೋರರನ್ನು ಹತ್ತಿಕ್ಕುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದರೂ, ಫ್ರಾನ್ಸ್ ಮತ್ತು ಅಮೆರಿಕದೊಂದಿಗಿನ ರಕ್ಷಣಾ ಸಂಬಂಧಗಳನ್ನು ಕಡಿದುಕೊಂಡು ರಷ್ಯಾದ ಕಡೆಗೆ ವಾಲಿದ್ದು ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿಲ್ಲ.
ಇದನ್ನೂ ಓದಿ:ಪಾಕ್ ಅಣು ಸ್ಥಾವರದ ಮೇಲಿನ ದಾಳಿಗೆ ಇಂದಿರಾ ಗಾಂಧಿ ಅನುಮೋದನೆ ನೀಡಿರಲಿಲ್ಲ: ಮಾಜಿ ಸಿಐಎ ಅಧಿಕಾರಿ



















