ನವದೆಹಲಿ; ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಜಂಟಿ ಕಾರ್ಯಾಚರಣೆ ವೇಳೆ ಒಟ್ಟು ಐವರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಲಾಗಿದೆ. ಆರೋಪಿಗಳು ಉಗ್ರ ಸಂಘಟನೆಯ ಸ್ಲೀಪರ್ ಸೆಲ್‌ನ ಭಾಗವಾಗಿದ್ದು, ಸಂಘಟನೆಯ ಬಲವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಬಂಧಿತರಲ್ಲಿ ಮೂವರನ್ನು ಅಶರ್ ದಾನಿಶ್, ಅಫ್ತಾಬ್ ಮತ್ತು ಸುಫಿಯಾನ್ ಎಂದು ಗುರುತಿಸಲಾಗಿದೆ. ಬಂಧಿತ ಐವರು ಶಂಕಿತ ಉಗ್ರರು ರಾಸಾಯನಿಕ ಅಸ್ತ್ರಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದರು. ಜೊತೆಗೆ, ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ‘ಖಿಲಾಫತ್’ ಮಾದರಿಯನ್ನು ಅನುಸರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಶರ್ ದಾನಿಶ್: ವಿದ್ಯಾರ್ಥಿಯ ಸೋಗಿನಲ್ಲಿದ್ದ ಈತನನ್ನು ರಾಂಚಿಯ ತಬಾರಕ್ ಲಾಡ್ಜ್‌ನಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಈತ ಇದೇ ವರ್ಷದ ಜನವರಿಯಲ್ಲಿ ನಗರಕ್ಕೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ.
ಅಫ್ತಾಬ್ ಮತ್ತು ಸುಫಿಯಾನ್: ಮುಂಬೈ ನಿವಾಸಿಗಳಾದ ಇವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಇತರೆ ಇಬ್ಬರು: ಉಳಿದಿಬ್ಬರಲ್ಲಿ ಒಬ್ಬನನ್ನು ಹೈದರಾಬಾದ್‌ನಲ್ಲಿ ಮತ್ತು ಮತ್ತೊಬ್ಬನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಅವರ ಗುರುತನ್ನು ತಕ್ಷಣವೇ ಖಚಿತಪಡಿಸಲು ಸಾಧ್ಯವಾಗಿಲ್ಲ.
ರಾಸಾಯನಿಕ ಅಸ್ತ್ರಗಳ ತಯಾರಿಕೆ
“ಆರೋಪಿಗಳಿಂದ ಒಂದು ಪಿಸ್ತೂಲ್ ಮತ್ತು ಹಲವಾರು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾನಿಶ್ ಮತ್ತು ಅಫ್ತಾಬ್ ರಾಸಾಯನಿಕ ಅಸ್ತ್ರಗಳನ್ನು ತಯಾರಿಸುವಲ್ಲಿ ಪರಿಣತರಾಗಿದ್ದಾರೆ. ಅದಕ್ಕಾಗಿ ಅವರು ಬಳಸುತ್ತಿದ್ದ ವಸ್ತುಗಳು ಮತ್ತು ರಾಸಾಯನಿಕಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಮೂಲಗಳು ತಿಳಿಸಿವೆ.
ವಶಪಡಿಸಿಕೊಂಡ ರಾಸಾಯನಿಕಗಳಲ್ಲಿ ಹೈಡ್ರೋಕ್ಲೋರಿಕ್ ಆಸಿಡ್, ನೈಟ್ರಿಕ್ ಆಸಿಡ್, ಸೋಡಿಯಂ ಬೈಕಾರ್ಬನೇಟ್, ಸಲ್ಫರ್ ಪೌಡರ್, ಪಿಎಚ್ ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ.