ರಾಯಚೂರು: ಜಿಲ್ಲಾ ಗ್ರಾಹಕರ ಆಯೋಗ ಸೇವಾ ನ್ಯೂನತೆ ತೋರಿದ ಹಿನ್ನೆಲೆಯಲ್ಲಿ ಜೊಮ್ಯಾಟೊ ಮತ್ತು ಡೊಮಿನೊಸ್ ಗೆ 40 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ನಗರದ ವಿದ್ಯಾಶ್ರೀ ಎಂಬ ಮಹಿಳೆ 2024ರ ಮಾರ್ಚ್ 17ರಂದು ಜೊಮ್ಯಾಟೊದಿಂದ ಡೊಮಿನೊಸ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ, ಪಿಜ್ಜಾ ಮಾತ್ರ ಅವರ ಮನೆಗೆ ಬಂದಿರಲಿಲ್ಲ. ಇದಕ್ಕಾಗಿ ಆನ್‌ಲೈನ್ ಮೂಲಕ 337 ರೂ. ಪಾವತಿಸಿದ್ದರು. ಎರಡು ಗಂಟೆಯ ನಂತರ ಪಿಜ್ಜಾ ಸರಬರಾಜು ಮಾಡದಿದ್ದರೂ ಹಣ ಪಾವತಿಸಿ, ಪಿಜ್ಜಾ ಖರೀದಿಸಿದ ಬಗ್ಗೆ ಗ್ರಾಹಕರ ಮೊಬೈಲ್‌ಗೆ ಸಂದೇಶ ಬಂದಿತ್ತು. ಇದನ್ನು ಪ್ರಶ್ನಿಸಿದಾಗ ಅಚಾತುರ್ಯದಿಂದ ಆಗಿದೆ ಎಂದು ಹೇಳಿದರೂ ಪಿಜ್ಜಾ ಸರಬರಾಜು ಮಾಡಿರಲಿಲ್ಲ. ಇದರಿಂದಾಗಿ ಅವರು, ಜಿಲ್ಲಾ ಗ್ರಾಹಕರ ಆಯೋಗಕ್ಕೆ ಗ್ರಾಹಕರು ದೂರು ಸಲ್ಲಿಸಿದ್ದರು.
ಇದನ್ನು ಆಧರಿಸಿ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಯಚೂರಿನ ಜೊಮ್ಯಾಟೊ ಮತ್ತು ಬೆಂಗಳೂರಿನ ಡೊಮಿನೊಸ್ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಆದರೂ ಕಂಪನಿ ವಿಚಾರಣೆಗೆ ಹಾಜರಾಗಿರಲಿಲ್ಲ.
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ರಾಯಚೂರು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರ ಕುಮಾರ್ ಹಾಗೂ ಸದಸ್ಯ ಪ್ರಭುದೇವ ಪಾಟೀಲ್ ದೂರುದಾರರ ಮಾನಸಿಕ ವ್ಯಥೆ ಮತ್ತು ಸೇವಾ ನ್ಯೂನತೆ ಆಧರಿಸಿ 40 ಸಾವಿರ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ ಎನ್ನಲಾಗಿದೆ.