ಢಾಕಾ: ಬಾಂಗ್ಲಾದೇಶದ ಯುವ ನಾಯಕ ಶರೀಫ್ ಒಸ್ಮಾನ್ ಹಾದಿ ಅವರ ನಿಧನದ ನಂತರ ಇಡೀ ದೇಶ ಹಿಂಸಾಚಾರದ ಜ್ವಾಲೆಯಲ್ಲಿ ಬೇಯುತ್ತಿದೆ. ಪ್ರತಿಭಟನಾಕಾರರ ಆಕ್ರೋಶದ ಕಿಚ್ಚು ಈಗ ಮಾಧ್ಯಮಗಳತ್ತ ತಿರುಗಿದ್ದು, ರಾಜಧಾನಿ ಢಾಕಾದಲ್ಲಿರುವ ಖ್ಯಾತ ಪತ್ರಿಕೆಗಳಾದ ‘ಪ್ರೋಥಮ್ ಆಲೋ’ ಮತ್ತು ‘ದಿ ಡೈಲಿ ಸ್ಟಾರ್’ ಕಚೇರಿಗಳ ಮೇಲೆ ಭೀಕರ ದಾಳಿ ನಡೆಸಲಾಗಿದೆ. ಕಚೇರಿಯ ಒಳಗಡೆ ಪತ್ರಕರ್ತರು ಇರುವಾಗಲೇ ಕಟ್ಟಡಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಅಕ್ಷರಶಃ ಸಾವಿನ ದೃಶ್ಯವನ್ನು ಸೃಷ್ಟಿಸಿದ್ದರು.

ಕಟ್ಟಡದೊಳಗೆ ದಟ್ಟವಾದ ಹೊಗೆ ತುಂಬಿಕೊಂಡಿದ್ದಾಗ ಪತ್ರಕರ್ತೆ ಜೈಮಾ ಇಸ್ಲಾಂ ಎಂಬುವವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ “ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ… ನೀವು ನನ್ನನ್ನು ಕೊಲ್ಲುತ್ತಿದ್ದೀರಿ” ಎಂಬ ಸಾಲುಗಳು ಬಾಂಗ್ಲಾದೇಶದ ಪ್ರಸ್ತುತ ದುಸ್ಥಿತಿಗೆ ಸಾಕ್ಷಿಯಂತಿತ್ತು. ನೂರಾರು ಜನರಿದ್ದ ಉದ್ರಿಕ್ತ ಗುಂಪು ಮೊದಲು ‘ಪ್ರೋಥಮ್ ಆಲೋ’ ಕಚೇರಿಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿತು. ತದನಂತರ ಹತ್ತಿರದಲ್ಲೇ ಇದ್ದ ‘ದಿ ಡೈಲಿ ಸ್ಟಾರ್’ ಕಚೇರಿಗೆ ನುಗ್ಗಿ ನೆಲಮಹಡಿ ಹಾಗೂ ಮೊದಲ ಮಹಡಿಯನ್ನು ಸುಟ್ಟು ಹಾಕಿದರು.
ಸಾವಿನ ಭೀತಿಯಲ್ಲಿದ್ದ ಪತ್ರಕರ್ತರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದ ತಾರಸಿಯತ್ತ ಓಡಿದರು. ಸತತ ನಾಲ್ಕು ಗಂಟೆಗಳ ಕಾಲ ಹೊಗೆ ಮತ್ತು ಬೆಂಕಿಯ ನಡುವೆ ಸಿಲುಕಿದ್ದ ಸುಮಾರು 25 ರಿಂದ 30 ಪತ್ರಕರ್ತರನ್ನು ಬಾಂಗ್ಲಾದೇಶ ಸೇನೆ ಮತ್ತು ಅಗ್ನಿಶಾಮಕ ದಳದವರು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸೇನಾ ಅಧಿಕಾರಿಯೊಬ್ಬರ ಸಾಹಸವನ್ನು ಸಿಬ್ಬಂದಿ ಕೊಂಡಾಡಿದ್ದಾರೆ.
ಮಾಧ್ಯಮಗಳ ಮೇಲಿನ ಈ ದೌರ್ಜನ್ಯ ಇಲ್ಲಿಗೇ ನಿಂತಿಲ್ಲ. ಎಡಿಟರ್ಸ್ ಕೌನ್ಸಿಲ್ ಅಧ್ಯಕ್ಷ ಹಾಗೂ ‘ನ್ಯೂ ಏಜ್’ ಪತ್ರಿಕೆಯ ಸಂಪಾದಕ ನೂರುಲ್ ಕಬೀರ್ ಅವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದ್ದು, ಅವರ ಕೂದಲು ಹಿಡಿದು ಎಳೆದಾಡಿ ಹಿಂಸಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಶೇಷವೆಂದರೆ, ದಾಳಿಗೊಳಗಾದ ಈ ಪತ್ರಿಕೆಗಳು ಅಲ್ಲಿನ ಮಧ್ಯಂತರ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದವು ಎನ್ನಲಾಗಿದ್ದು, ಆದರೂ ಇವುಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಸ್ತುತ ‘ದಿ ಡೈಲಿ ಸ್ಟಾರ್’ ಕಚೇರಿಯ ಮುಂದೆ ಸೇನೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಹಾದಿ ಅವರ ಸಾವಿನಿಂದ ಕೆರಳಿದ ಪ್ರತಿಭಟನಾಕಾರರು ಇಡೀ ನಗರವನ್ನು ಅಕ್ಷರಶಃ ಯುದ್ಧಭೂಮಿಯನ್ನಾಗಿ ಮಾರ್ಪಡಿಸಿದ್ದಾರೆ.
ಇದನ್ನೂ ಓದಿ: ಭಾರತ ವಿರೋಧಿ ಹೋರಾಟಗಾರ ಒಸ್ಮಾನ್ ಹಾದಿ ಹತ್ಯೆ : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ



















