ಬ್ಯೂನಸ್ ಏರ್ಸ್: ಡ್ರಗ್ಸ್ ದಂಧೆಕೋರರ ಗುಂಪೊಂದು ಮೂವರು ಯುವತಿಯರನ್ನು ಬರ್ಬರವಾಗಿ ಹತ್ಯೆಗೈದು, ಆ ಕೃತ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಿದ ಆಘಾತಕಾರಿ ಘಟನೆಯೊಂದು ಅರ್ಜೆಂಟೀನಾದಲ್ಲಿ ನಡೆದಿದೆ. ಈ ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಘಟನೆ ಖಂಡಿಸಿ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ.
ಬ್ಯೂನಸ್ ಐರಿಸ್‌ನ ದಕ್ಷಿಣ ಉಪನಗರದ ಮನೆಯೊಂದರ ಅಂಗಳದಲ್ಲಿ ಹೂತಿಟ್ಟಿದ್ದ ಸ್ಥಿತಿಯಲ್ಲಿ 20 ವರ್ಷದ ಸೋದರಸಂಬಂಧಿಗಳಾದ ಮೊರೆನಾ ವೆರ್ಡಿ ಮತ್ತು ಬ್ರೆಂಡಾ ಡೆಲ್ ಕ್ಯಾಸ್ಟಿಲ್ಲೊ ಹಾಗೂ 15 ವರ್ಷದ ಲಾರಾ ಗುಟೈರೆಜ್ ಅವರ ಮೃತದೇಹಗಳು ಪತ್ತೆಯಾಗಿವೆ. ಈ ಮೂವರು ಯುವತಿಯರು ನಾಪತ್ತೆಯಾದ ಐದು ದಿನಗಳ ನಂತರ ಅವರ ಶವಗಳು ದೊರೆತಿವೆ.
ತನಿಖಾಧಿಕಾರಿಗಳ ಪ್ರಕಾರ, ಸೆಪ್ಟೆಂಬರ್ 19ರಂದು ಪಾರ್ಟಿಗೆ ಹೋಗೋಣವೆಂದು ನಂಬಿಸಿ, ಈ ಯುವತಿಯರನ್ನು ವ್ಯಾನ್‌ವೊಂದರಲ್ಲಿ ಅಪಹರಿಸಲಾಗಿದೆ. ಡ್ರಗ್ಸ್ ಗ್ಯಾಂಗ್‌ನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ “ಶಿಕ್ಷೆ” ನೀಡಲು ಮತ್ತು ಇತರರಿಗೆ ಎಚ್ಚರಿಕೆ ನೀಡಲು ಈ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಹಂತಕರು ಯುವತಿಯರ ಬೆರಳುಗಳನ್ನು ಕತ್ತರಿಸಿ, ಉಗುರುಗಳನ್ನು ಕಿತ್ತು, ಹೊಡೆದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಅರ್ಜೆಂಟೀನಾದ ಮಾಧ್ಯಮಗಳು ವರದಿ ಮಾಡಿವೆ. ಆಘಾತಕಾರಿ ಸಂಗತಿಯೆಂದರೆ, ಈ ಭೀಕರ ಹಾಗೂ ಅಮಾನವೀಯ ಕೃತ್ಯವನ್ನು ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆ ಕ್ರೂರಿಗಳು ನೇರ ಪ್ರಸಾರ ಮಾಡಿದ್ದು, ಇದನ್ನು 45 ಜನರು ವೀಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐವರು ಆರೋಪಿಗಳ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐದು ಜನರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಕಾರಿನ ಮೂಲಕ ಸಹಕರಿಸಿದ ಐದನೇ ಶಂಕಿತನನ್ನು ಬೊಲಿವಿಯಾ ಗಡಿಭಾಗದ ವಿಲ್ಲಾಝೋನ್ ನಗರದಲ್ಲಿ ಬಂಧಿಸಲಾಗಿದೆ. ಆದರೆ, ಈ ಕೃತ್ಯದ ಪ್ರಮುಖ ಸೂತ್ರಧಾರ ಎನ್ನಲಾದ 20 ವರ್ಷದ ಪೆರು ದೇಶದ ಯುವಕ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆ
ಈ ಘಟನೆಯನ್ನು ಖಂಡಿಸಿ ಬ್ಯೂನಸ್ ಐರಿಸ್‌ನ ಬೀದಿಗಳಲ್ಲಿ ಸಾವಿರಾರು ಜನರು ಪ್ರತಿಭಟನೆ ಆರಂಭಿಸಿದ್ದಾರೆ. “ಇದು ನಾರ್ಕೋ-ಫೆಮಿಸೈಡ್ (ಮಾದಕವಸ್ತು ಸಂಬಂಧಿತ ಸ್ತ್ರೀಹತ್ಯೆ)!” ಮತ್ತು “ನಮ್ಮ ಜೀವಗಳು ಅಗ್ಗವಲ್ಲ!” ಎಂಬ ಘೋಷಣೆಗಳನ್ನು ಕೂಗುತ್ತಾ ಸಂಸತ್ ಭವನದತ್ತ ಮೆರವಣಿಗೆ ನಡೆಸಿದ್ದಾರೆ. ಮೃತ ಯುವತಿಯರ ಸಂಬಂಧಿಕರು ಅವರ ಭಾವಚಿತ್ರಗಳನ್ನು ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. “ಪ್ರಾಣಿಗಳಿಗೂ ಈ ರೀತಿ ಮಾಡುವುದಿಲ್ಲ,” ಎಂದು ಮೃತರ ಅಜ್ಜ ಆಂಟೋನಿಯೊ ಡೆಲ್ ಕ್ಯಾಸ್ಟಿಲ್ಲೊ ಕಣ್ಣೀರಿಟ್ಟಿದ್ದಾರೆ.
ಮೆಟಾ ಕಂಪನಿಯ ನಿರಾಕರಣೆ
ಈ ಕೃತ್ಯವು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೇರ ಪ್ರಸಾರವಾಗಿಲ್ಲ ಎಂದು ಇನ್‌ಸ್ಟಾಗ್ರಾಮ್‌ನ ಮಾತೃಸಂಸ್ಥೆ ಮೆಟಾ ನಿರಾಕರಿಸಿದೆ. “ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಸ್ಟ್ರೀಮ್ ನಡೆದಿದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಈ ಭೀಕರ ಅಪರಾಧದ ತನಿಖೆಯಲ್ಲಿ ನಾವು ಕಾನೂನು ಜಾರಿ ಸಂಸ್ಥೆಗಳಿಗೆ ಸಹಕರಿಸುವುದನ್ನು ಮುಂದುವರಿಸುತ್ತೇವೆ,” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.



















