ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಕಾಲ್ತುಳಿತವು ಹಲವರನ್ನು ಬಲಿಪಡೆದಿದ್ದರೂ, ಬುಧವಾರ ಮುಂಜಾನೆ ವೇಳೆಗೆ ಪರಿಸ್ಥಿತಿ ಹತೋಟಿಗೆ ಬಂದಿರುವ ಕಾರಣ, ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವನ್ನು ನಿಗದಿಯಂತೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಅದರಂತೆ, ಈಗ ಕುಂಭಮೇಳದ 2ನೇ ಶಾಹಿ ಸ್ನಾನ ಆರಂಭವಾಗಿದೆ.
ವಿವಿಧ ಅಖಾಡಗಳ ಸಾಧು, ಸಂತರು, ಅಘೋರಿಗಳು ತಮ್ಮ ತಮ್ಮ ತಂಡದೊಂದಿಗೆ ಮೆರವಣಿಗೆ ಆರಂಭಿಸಿದ್ದಾರೆ. ಸಂಪ್ರದಾಯದಂತೆ ಮೆರವಣಿಗೆಗಳ ಮೂಲಕ ತ್ರಿವೇಣಿ ಸಂಗಮಕ್ಕೆ ಆಗಮಿಸಿ ಒಂದೊಂದೇ ಅಖಾಡಗಳು ಅಮೃತ ಸ್ನಾನ ಗೈಯ್ಯಲಿವೆ. ಕಾಲ್ತುಳಿತದ ಹಿನ್ನೆಲೆಯಲ್ಲಿ ಮೊದಲಿಗೆ ಶಾಹಿ ಸ್ನಾನವನ್ನು ಮುಂದೂಡಿಕೆ ಮಾಡಲು ಅಖಾಡಗಳು ನಿರ್ಧರಿಸಿದ್ದವಾದರೂ, ನಂತರದಲ್ಲಿ ಜನದಟ್ಟಣೆ ಕಡಿಮೆಯಾದ ಕಾರಣ, ಇಂದೇ ಅಮೃತ ಸ್ನಾನ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಪೊಲೀಸರ ಬಿಗಿಭದ್ರತೆಯ ನಡುವೆ ಅಖಾಡಗಳ ಸಾಧುಗಳು ತಮ್ಮ ಧಾರ್ಮಿಕ ಪ್ರಕ್ರಿಯೆಯನ್ನು ಈಗ ಆರಂಭಿಸಿದ್ದಾದರೆ.
10 ಗಂಟೆವರೆಗೆ 3.61 ಕೋಟಿ ಜನರಿಂದ ಸ್ನಾನ:
ದುರ್ಘಟನೆಯ ಹೊರತಾಗಿಯೂ ಪ್ರಯಾಗ್‌ರಾಜ್ ಗೆ ಭಕ್ತಾದಿಗಳ ಆಗಮನ ಮುಂದುವರಿದಿದ್ದು, ಬೆಳಗ್ಗೆ 10 ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿ 3.61 ಕೋಟಿ ಮಂದಿ ಮಿಂದೆದ್ದಿದ್ದಾರೆ. ಇಂದು ಸುಮಾರು 10 ಕೋಟಿ ಮಂದಿ ಪುಣ್ಯಸ್ನಾನ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ.13ರಿಂದ ಅಂದರೆ ಮಹಾಕುಂಭ ಆರಂಭ ಆದಾಗಿನಿಂದಲೂ ಈವರೆಗೆ ಸುಮಾರು 20 ಕೋಟಿ ಭಕ್ತರು ಅಮೃತ ಸ್ನಾನ ಮಾಡಿದ್ದು, ಈ ಸಂಖ್ಯೆ 40 ಕೋಟಿಗೇರಿಕೆಯಾಗುವ ನಿರೀಕ್ಷೆಯಿದೆ.