ವಾಷಿಂಗ್ಟನ್: ವಿದೇಶಗಳಲ್ಲಿ ಕುಳಿತು ಭಾರತದಲ್ಲಿ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದ ಇಬ್ಬರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳನ್ನು ಬಂಧಿಸುವಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಯಶಸ್ವಿಯಾಗಿವೆ. ಹರ್ಯಾಣ ಪೊಲೀಸರು ಸೇರಿದಂತೆ ಭದ್ರತಾ ಏಜೆನ್ಸಿಗಳ ಅಧಿಕಾರಿಗಳು ಅಮೆರಿಕ, ಜಾರ್ಜಿಯಾದಲ್ಲಿ ವೆಂಕಟೇಶ್ ಗರ್ಗ್ ಮತ್ತು ಭಾನು ರಾಣಾನನ್ನು ಬಂಧಿಸಿದ್ದಾರೆ.
ಭಾನು ರಾಣಾ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವನಾಗಿದ್ದಾನೆ. ಇಬ್ಬರನ್ನೂ ಶೀಘ್ರದಲ್ಲೇ ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಭಾರತದ 24ಕ್ಕೂ ಹೆಚ್ಚು ಪ್ರಮುಖ ದರೋಡೆಕೋರರು ವಿದೇಶಗಳಲ್ಲಿ ತಲೆಮರೆಸಿಕೊಂಡು ಅಲ್ಲೇ ತಮ್ಮ ಅಪರಾಧ ಸಾಮ್ರಾಜ್ಯವನ್ನು ನಿರ್ವಹಿಸುತ್ತಿದ್ದಾರೆ.
ಬಿಎಸ್‌ಪಿ ನಾಯಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವೆಂಕಟೇಶ್ ಗರ್ಗ್
ಹರ್ಯಾಣದ ನಾರಾಯಣಗಢದ ನಿವಾಸಿಯಾಗಿರುವ ವೆಂಕಟೇಶ್ ಗರ್ಗ್, ಭಾರತದಲ್ಲಿ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಗುರುಗ್ರಾಮದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕರೊಬ್ಬರ ಹತ್ಯೆಯ ನಂತರ ಈತ ಜಾರ್ಜಿಯಾಕ್ಕೆ ಪರಾರಿಯಾಗಿದ್ದ. ಅಲ್ಲಿಂದಲೇ ಹರ್ಯಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಭಾರತದ ಇತರ ರಾಜ್ಯಗಳ ಯುವಕರನ್ನು ತನ್ನ ಅಪರಾಧ ಜಾಲಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದ. ವಿದೇಶದಲ್ಲಿರುವ ಮತ್ತೊಬ್ಬ ದರೋಡೆಕೋರ ಕಪಿಲ್ ಸಾಂಗ್ವಾನ್ ಜೊತೆ ಸೇರಿ ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ಬಿಲ್ಡರ್‌ವೊಬ್ಬರ ಮನೆ ಮತ್ತು ಫಾರ್ಮ್‌ಹೌಸ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಸಾಂಗ್ವಾನ್ ಗ್ಯಾಂಗ್‌ನ ನಾಲ್ವರು ಶೂಟರ್‌ಗಳನ್ನು ಬಂಧಿಸಿದ್ದರು.
ಬಿಷ್ಣೋಯ್ ಗ್ಯಾಂಗ್ ಸದಸ್ಯ ಭಾನು ರಾಣಾ
ಅಮೆರಿಕದಲ್ಲಿ ಬಂಧಿತನಾಗಿರುವ ಭಾನು ರಾಣಾ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟು ಹೊಂದಿದ್ದಾನೆ. ಕರ್ನಾಲ್ ಮೂಲದವನಾದ ಈತ, ದೀರ್ಘಕಾಲದಿಂದ ಅಪರಾಧ ಜಗತ್ತಿನಲ್ಲಿ ಸಕ್ರಿಯನಾಗಿದ್ದು, ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಹರ್ಯಾಣ, ಪಂಜಾಬ್ ಮತ್ತು ದೆಹಲಿಯಲ್ಲಿ ತನ್ನ ಅಪರಾಧ ಜಾಲವನ್ನು ವಿಸ್ತರಿಸಿದ್ದ. ಪಂಜಾಬ್‌ನಲ್ಲಿ ನಡೆದ ಗ್ರೆನೇಡ್ ದಾಳಿಯ ತನಿಖೆಯ ವೇಳೆ ಈತನ ಹೆಸರು ಬೆಳಕಿಗೆ ಬಂದಿತ್ತು. ಜೂನ್ ತಿಂಗಳಲ್ಲಿ ಕರ್ನಾಲ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ರಾಣಾನ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ ಹ್ಯಾಂಡ್ ಗ್ರೆನೇಡ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಅಜ್ಜಿ ಪಕ್ಕ ಮಲಗಿದ್ದ 4 ವರ್ಷದ ಬಾಲಕಿಯ ಅಪಹರಿಸಿ, ಅತ್ಯಾಚಾರ!



















