ಬೆಂಗಳೂರು : ಹುಡುಗಿಯರಿದ್ದಾರೆ ಎಂದು ಆನ್‌ಲೈನ್‌ನಲ್ಲಿ ಪೋಸ್ಟ್ ಹಾಕಿ ಯುವಕರನ್ನು ಸಂಪರ್ಕಿಸುತ್ತಿದ್ದ ಗ್ಯಾಂಗ್, ಬಳಿಕ ಭೇಟಿಗೆ ಬಂದವರನ್ನು ಕಿಡ್ನಾಪ್ ಮಾಡಿ ಹಣ, ಮೊಬೈಲ್ ಹಾಗೂ ಚಿನ್ನದ ಸರ ದೋಚುತ್ತಿದ್ದ ಪ್ರಕರಣವನ್ನು ಸಿಸಿಬಿ ಅಧಿಕಾರಿಗಳು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.
ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಈ ಕೃತ್ಯ ನಡೆದಿದ್ದು, ಲೊಕ್ಯಾಂಟೋ ವೆಬ್‌ಸೈಟ್‌ನಲ್ಲಿ ಹುಡುಗಿಯರ ಬಗ್ಗೆ ಮಾಹಿತಿ ನೋಡಿ ಒಬ್ಬ ವ್ಯಕ್ತಿ ಭೇಟಿಗೆ ತೆರಳಿದ್ದ. ಈ ವೇಳೆ ಆಟೋದಲ್ಲಿ ಇದ್ದ ಜೀಬಾ ಖಾನ್ ಮತ್ತು ದೀಪಾ ಸೇರಿ ಗ್ಯಾಂಗ್ ಸದಸ್ಯರು, ಯುವತಿಯ ಭೇಟಿಗೂ ಮುನ್ನವೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ನಂತರ ಚೇತನ್, ಮನು, ಶಾಬು, ಮಂಜುನಾಥ್, ಜಯಕುಮಾರ್, ಅರುಣ್ ಕೀರ್ತಿ, ಕಾಂತರಾಜು, ಸಂದೀಪ್ ಸೇರಿದಂತೆ ಗ್ಯಾಂಗ್ ಸದಸ್ಯರು ಸಂತ್ರಸ್ತನನ್ನು ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿಸಿ, ಹಣ, ಮೊಬೈಲ್ ಹಾಗೂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನೆಯ ಬಗ್ಗೆ ಸಿಸಿಬಿಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ 11 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಆಟೋಗಳು, ನಾಲ್ಕು ದ್ವಿಚಕ್ರ ವಾಹನಗಳು, 13 ಮೊಬೈಲ್‌ಫೋನ್‌ಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ. ಈ ಗ್ಯಾಂಗ್ ಇದೇ ರೀತಿಯಲ್ಲಿ ಹಲವರನ್ನು ಹುಡುಗಿಯರ ಹೆಸರಿನಲ್ಲಿ ಬಲೆಗೆ ಬೀಳಿಸಿ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ನಲ್ಲಿ ನೀರು ಹರಿಸಿ ಪ್ರಿಯಕರನ ತುಂಡರಿಸಿದ ದೇಹ ಡ್ರಮ್‌ನಲ್ಲಿಟ್ಟ ಪ್ರೇಯಸಿ : ಕಲ್ಯಾಣ್‌ನಲ್ಲೊಂದು ಭೀಕರ ಕೊಲೆ!



















