ಬದಲಾದ ಕಾಲಘಟ್ಟದಲ್ಲಿ ಕೇವಲ ದುಡಿದು ಹಣ ಗಳಿಸುತ್ತೇನೆ ಎಂದರೆ ಅದು ಕಷ್ಟ ಸಾಧ್ಯ. ದುಡಿಯುವ ಹಣದಲ್ಲಿ ಉಳಿಸಿ, ಉಳಿಸಿದ ಹಣವನ್ನು ಸರಿಯಾಗಿ ಹೂಡಿಕೆ ಮಾಡಿದರೆ ಮಾತ್ರ ಏರುತ್ತಿರುವ ಹಣದುಬ್ಬರಕ್ಕೆ ಸರಿಯಾಗಿ ಗಳಿಕೆ ಮಾಡಲು ಸಾಧ್ಯವಾಗುತ್ತದೆ. ಅದರಲ್ಲೂ ಈಗ, ಹೂಡಿಕೆ ಎಂಬುದು ಶ್ರೀಮಂತರಿಗೆ ಮಾತ್ರವಲ್ಲ, ಬಡವರು, ಸೀಮಿತ ಆದಾಯ ಇರುವವರು ಕೂಡ ಹೂಡಿಕೆ ಮಾಡಿ, ಹೆಚ್ಚಿನ ರಿಟರ್ನ್ಸ್ ಪಡೆಯಬಹುದಾಗಿದೆ. ಇದಕ್ಕೆ ಎಸ್ಐಪಿಯು ಉತ್ತಮ ವೇದಿಕೆಯಾಗಿದೆ.
ಹೌದು, ಕಡಿಮೆ ಆದಾಯ ಇರುವವರು ಕೂಡ ಮಾಸಿಕ ಕೇವಲ ಒಂದು ಸಾವಿರ ರೂಪಾಯಿಯನ್ನು ಎಸ್ಐಪಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ಸ್ ಪಡೆಯಬಹುದಾಗಿದೆ. ಉದಾಹರಣೆಗೆ, ನೀವು ಪ್ರತಿ ತಿಂಗಳು ಈಕ್ವಿಟಿ ಎಸ್ಐಪಿಯಲ್ಲಿ ಸಾವಿರ ರೂಪಾಯಿಯಂತೆ 30 ವರ್ಷಗಳವರೆಗೆ ಹೂಡಿಕೆ ಮಾಡಿದರೆ 34.9 ಲಕ್ಷ ರೂ. ಗಳಿಸಬಹುದಾಗಿದೆ. ವಾರ್ಷಿಕ ಶೇ.12ರಷ್ಟು ರಿಟರ್ನ್ಸ್ ಎಂದರೂ ಇಷ್ಟೊಂದು ಹಣ ಗಳಿಸಬಹುದಾಗಿದೆ. ನೀವು ಹೂಡಿಕೆ ಮಾಡಿದ ಮೊತ್ತ ಕೇವಲ 3.6 ಲಕ್ಷ ರೂ. ಆದರೆ, 12 ಪರ್ಸೆಂಟ್ ರಿಟರ್ನ್ಸ್ ಸೇರಿ ಕೈತುಂಬ ಹಣ ಬರುತ್ತದೆ.
20 ವರ್ಷ ಹೂಡಿಕೆ ಮಾಡಿದರೆ?
30 ವರ್ಷವೇ ಹೂಡಿಕೆ ಮಾಡಬೇಕು ಅಂತ ನಿಯಮವೇನೂ ಇಲ್ಲ. ಲಾಕ್ ಇನ್ ಪೀರಿಯಡ್ ಅಂತೂ ಮೊದಲೇ ಇಲ್ಲ. ಹಾಗಾಗಿ, 20 ವರ್ಷಗಳವರೆಗೆ ಪ್ರತಿ ತಿಂಗಳು ಸಾವಿರ ರೂ. ಹೂಡಿಕೆ ಮಾಡಿದರೆ, ನೀವು ಒಟ್ಟು 2.4 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಶೇ.12ರಷ್ಟು ರಿಟರ್ನ್ಸ್ ಎಂದು ಲೆಕ್ಕಾಚಾರ ಹಾಕಿದರೂ 9.89 ಲಕ್ಷ ರೂ. ನಿಮ್ಮದಾಗಲಿದೆ.
ಇದೇ ರೀತಿ 10 ವರ್ಷಗಳವರೆಗೆ ಸತತವಾಗಿ ಸಾವಿರ ರೂ. ಹೂಡಿಕೆ ಮಾಡಿದರೆ 2.3 ಲಕ್ಷ ರೂ. ಗಳಿಕೆಯಾಗಲಿದೆ. ಕೆಲವೊಂದು ಸಲ ಎಸ್ಐಪಿಯಲ್ಲಿ ಶೇ.12ಕ್ಕಿಂತ ಹೆಚ್ಚಿನ ರಿಟರ್ನ್ಸ್ ಸಿಗಲಿದೆ. ಇದರಿಂದ ಗಳಿಕೆಯೂ ಹೆಚ್ಚಾಗಲಿದೆ.
ವಿಶೇಷ ಸೂಚನೆ: ಇದು ಹೂಡಿಕೆಯ ಕುರಿತು ನಿಮಗೆ ನೀಡುತ್ತಿರುವ ಮಾಹಿತಿ ಅಷ್ಟೆ. ಹಣಕಾಸು ಶಿಕ್ಷಣದ ಭಾಗವಾಗಿ ಮಾಹಿತಿ ನೀಡಲಾಗುತ್ತಿದೆ. ಯಾವುದರಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಹಣಕಾಸು ತಜ್ಞರ ಸಲಹೆ ಪಡೆದ ಬಳಿಕವಷ್ಟೇ ಹೂಡಿಕೆ ಮಾಡಿ.