ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನಟ ವಿನೋದ್ ರಾಜ್ (Vinod Raj) 1 ಲಕ್ಷ ರೂ. ನೆರವು ವಿತರಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ರೇಣುಕಾಸ್ವಾಮಿ ಕುಟುಂಬಸ್ಥರನ್ನು (Renukaswamy Family) ಭೇಟಿ ಮಾಡಿ ಸಾಂತ್ವನ ಹೇಳಿದ ವಿನೋದ್ ರಾಜ್ 1 ಲಕ್ಷ ರೂ. ನೆರವು ನೀಡಿದ್ದಾರೆ. ಇಂದು ಬೆಳಿಗ್ಗೆ ರೇಣುಕಾಸ್ವಾಮಿ ನಿವಾಸಕ್ಕೆ ವಿನೋದ್ ರಾಜ್ ತೆರಳಿದ್ದರು. ನಿಮ್ಮ ಮಗ ಮರಳಿ ಬರಲಿ ಎಂದು ಹಾರೈಸಿ, ತಂದೆ-ತಾಯಿಗೆ ಧೈರ್ಯ ತುಂಬಿದ್ದಾರೆ. ನಂತರ 1 ಲಕ್ಷ ರೂ. ಕೊಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

ವಿನೋದ್ ರಾಜ್ ಭೇಟಿಯ ಕುರಿತು ರೇಣುಕಾಸ್ವಾಮಿ ತಂದೆ ಮಾತನಾಡಿ, ಮಗನ ಕಳೆದುಕೊಂಡು ಕರಳು ಹಿಂಡಿದಂತಾಗುತ್ತಿದೆ. ನಾವು ತುಂಬಾ ನೊಂದಿದ್ದೇವೆ. ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಮಗನ ಕೊಂದವರು ಯಾರು ಎಂಬುದು ನಮಗೆ ಗೊತ್ತಿಲ್ಲ. ಆದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಟಿ ಲೀಲಾವತಿ ಅವರ ಬಗ್ಗೆ ತುಂಬಾ ಕೇಳಿದ್ದೇನೆ.’ ಇದೀಗ ಅವರ ಮಗ ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿ, ಧೈರ್ಯ ನೀಡಿದ್ದು ಸಮಾಧಾನ ನೀಡಿದೆ ಎಂದು ಹೇಳಿದ್ದಾರೆ.
ಇನ್ನು ವಿನೋದ್ ರಾಜ್ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲಿ ಅವರ ಪರಿಸ್ಥಿತಿ ಕಂಡು ಕಣ್ಣೀರಾಗಿದ್ದರು. ಸಹೋದರನಂತಿದ್ದ ನಟ ದರ್ಶನ್ ಸುಧಾರಿಸಿ ಬರಲಿ ಎಂದು ಶುಭ ಹಾರೈಸಿದ್ದರು. ಜೊತೆಗೆ ಇಂದು ರೇಣುಕಾಸ್ವಾಮಿ ಮನೆಗೆ ಭೇಟಿಕೊಟ್ಟು ಸಾಂತ್ವಾನ ಹೇಳಿ, ಕೈಲಾದ ಸಹಾಯ ಹಸ್ತಾಂತರಿಸಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.