ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡಿದ್ರೆ ಟ್ರೆಂಡಿಂಗ್ ನಲ್ಲಿ ಇರ್ತಿವಿ ಅಂತ ಕೆಲವು ನಾಯಕರು ತಿಳ್ಕೊಂಡಿದ್ದಾರೇನೋ ಅನ್ನಿಸ್ತಿದೆ. ಅದರಲ್ಲೂ ರಾಜ್ಯ ಕಾಂಗ್ರೆಸ್ ನಾಯಕರು.. ಒಬ್ಬರಾದ ಮೇಲೆ ಒಬ್ಬರು ಟ್ರೆಂಡಿಂಗ್ ಪಟ್ಟಿ ಸೇರಲು ಪೈಪೋಟಿ ನಡೆಸಿದ ಹಾಗೆ ಕಾಣ್ತಾ ಇದೆ. ಈ ಸಾಲಿಗೆ ಹೊಸ ಸೇರ್ಪಡೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ.
ಕಾರಟಗಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಂಗಡಗಿ ಬಹಳ ಜೋಶ್ ನಲ್ಲಿ ಮಾತಾಡಿದ್ರು. ಮಾತಿನ ಭರದಲ್ಲಿ, ಮೋದಿ ಮೋದಿ ಅಂದ್ರೆ ಯುವಕರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ ಎಂಬ ಹೇಳಿಕೆಯನ್ನೂ ಕೊಟ್ಟುಬಿಟ್ರು. ಈ ಹೇಳಿಕೆ ಈಗ ರಾಜಯಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಯುವಕರು ಹಾಗೂ ವಿದ್ಯಾರ್ಥಿಗಳು ಸಚಿವ ತಂಗಡಿಗೆ ಸವಾಲು ಹಾಕ್ತಿದ್ದಾರೆ. ಮೋದಿ ಮೋದಿ ಅಂತ ಕೂಗ್ತಾ ಇದ್ದಾರೆ. ನಮ್ಮ ಕಪಾಳಕೆ ಹೊಡೀರಿ ತಾಕತ್ತಿದ್ರೆ ಅಂತ ಎದುರೇಟು ಕೊಡ್ತಾ ಇದ್ದಾರೆ.
ಇಂಥ ವಿವಾದಗಳು ಕಾಂಗ್ರೆಸ್ ಗೆ ಇದೇ ಮೊದಲಲ್ಲ. ಈ ಹಿಂದೆ ಕೂಡ ನಾಯಕರು ಪ್ರಧಾನಿ ವಿರುದ್ಧ ಏನಾದರೊಂದು ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ್ದಿದೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ‘ನಾನು ನಿಮ್ಮಂತೆ ವೀಕ್ ಪಿಎಂ ಅಲ್ಲ, ಸ್ಟ್ರಾಂಗ್ ಸಿಎಂ” ಎಂದು ಟ್ವೀಟ್ ಮಾಡಿದ್ರು. ಮಾರನೇ ದಿನವೇ ಮೇಕೆದಾಟು ವಿಚಾರದಲ್ಲಿ ಡಿಎಂಕೆ ನಿಲುವು ಪ್ರಶ್ನಿಸಿ, ‘ನೀವು ಸ್ಟ್ರಾಂಗ್ ಸಿಎಂ ಅನ್ನೋದನ್ನ ಇಲ್ಲಿ ತೋರಿಸ್ರೀ’ ಅಂತ ಜನ ವಾಚಾಮಗೋಚಾರ ತರಾಟೆಗೆ ತೆಗೆದುಕೊಂಡರು…ಸಿಎಂ ಆ ವಿಚಾರವಾಗಿ ಮಾತನಾಡಲೇ ಇಲ್ಲ…
ಕಾಂಗ್ರೆಸ್ ಮುಖಂಡ ಮಂಜುನಾಥ್ ಚಿತ್ರದುರ್ಗದಲ್ಲಿ ‘ಮೋದಿ ನನ್ನ ಕೈಗೆ ಸಿಕ್ಕರೆ ಕಾಲಲ್ಲಿರೋದು ಕೈಗೆ ತಗೋಳ್ತೇನೆ’ ಅಂತ ಹೇಳಿದ್ರು. ರಾಜ್ಯ ನಾಯಕರಷ್ಟೇ ಅಲ್ಲ, ರಾಷ್ಟ್ರೀಯ ನಾಯಕರು ಹಾಗೂ ಅನ್ಯ ರಾಜ್ಯದವರು ಕೂಡ ಸಂಬಂಧವೇ ಇಲ್ಲದ ವಿಷಯದಲ್ಲಿ ಪ್ರಧಾನಿ ಮೋದಿ ಅವರನ್ನು ಎಳೆತಂದು ಕೆಟ್ಟ ಪದ ಬಳಕೆ ಮಾಡುತ್ತಲೇ ಬರುತ್ತಿದ್ದಾರೆ. ಚೈನೈನಲ್ಲಿ ಉದಯ ನಿಧಿ ಸ್ಟಾಲಿನ್ ಬಾಯಿ ಹರಿಬಿಟ್ಟು ‘ಪ್ರಧಾನಿ 28 ಪೈಸೆ ನಾಯಕ’ ಎಂದು ಹೇಳಿದ್ದರು. ಇತ್ತೀಚೆಗಷ್ಟೇ ಆರ್ ಜೆಡಿ ನಾಯಕ ಅವಧೇಶ್ ಸಿಂಗ್ ‘ಮೋದಿ ತಲೆಗೆ ಗುಂಡು ಹಾರಿಸಿ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಮೋದಿ ವಿರುದ್ಧ ಗುಡುಗಿದರೆ ಅವರ ಮಟ್ಟದ ನಾಯಕರಾಗುತ್ತೇವೆ ಅಂತ ಇವರೆಲ್ಲ ಭಾವಿಸಿದ್ದಾರೋ ಏನೋ ಗೊತ್ತಿಲ್ಲ… ಆದರೆ, ಜನ ಮಾತ್ರ ಇಂತಹ ಹೇಳಿಕೆಗಳನ್ನು ಬೆಂಬಲಿಸಿರುವುದನ್ನು ಮಾತ್ರ ಇದುವರೆಗೂ ಕಂಡಿಲ್ಲ.. ಮೋದಿ ವಿರುದ್ಧ ಕೆಟ್ಟ ಭಾಷೆ ಬಳಸಿದಷ್ಟೂ ಅವರು ಇನ್ನಷ್ಟು ಗಟ್ಟಿಯಾಗ್ತಾ ಹೋಗ್ತಿರೋದು ಮಾತ್ರ ಕಣ್ಣಿಗೆ ರಾಚುವಂತೆ ಕಾಣಿಸ್ತಿದೆ. ಇನ್ನಾದರೂ ಇಂಥವರು ತಮ್ಮ ‘ಭ್ರಮೆ ಬಿಟ್ಟು’ ಮಾಡುವ ಕೆಲಸ ಮಾಡಲಿ.