ಗುವಾಹಟಿ: ಅಸ್ಸಾಂನ ಹೆಮ್ಮೆಯ ಗಾಯಕ, ಕೋಟ್ಯಂತರ ಜನರ ಪ್ರೀತಿಯ ‘ಜುಬೀನ್ ದಾ’ ಅವರ ಸಿಂಗಾಪುರದಲ್ಲಿನ ಅನುಮಾನಾಸ್ಪದ ಸಾವಿನ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಜುಬೀನ್ ಅವರ ಆಪ್ತ ವಲಯದಲ್ಲಿದ್ದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಬಂಧಿಸಿದೆ. ಜುಬೀನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಮತ್ತು ಈಶಾನ್ಯ ಭಾರತ ಉತ್ಸವದ (NEIF) ಮುಖ್ಯ ಸಂಘಟಕ ಶ್ಯಾಮಕಾನು ಮಹಾಂತ ಅವರನ್ನು ಬಂಧಿಸಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಂಧನದಕ್ಕೆ ಕಾರಣ ಏನು?
ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನಡೆದ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಜುಬೀನ್ ಗಾರ್ಗ್, ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದರು. ಆದರೆ, ಇದು ಕೇವಲ ಆಕಸ್ಮಿಕ ಅವಘಡವಲ್ಲ, ಇದರ ಹಿಂದೆ ಸಂಚು ಅಡಗಿದೆ ಎಂಬ ಆರೋಪಗಳು ಕೇಳಿಬಂದ ತಕ್ಷಣ, ಅಸ್ಸಾಂ ಸರ್ಕಾರವು ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ಎಸ್‌ಐಟಿ ರಚಿಸಿತ್ತು.
ತನಿಖೆ ಆರಂಭಿಸಿದ ಎಸ್‌ಐಟಿ, ಶ್ಯಾಮಕಾನು ಮಹಾಂತ ಮತ್ತು ಸಿದ್ಧಾರ್ಥ ಶರ್ಮಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಇಬ್ಬರೂ ತನಿಖೆಗೆ ಸಹಕರಿಸದೆ ತಲೆಮರೆಸಿಕೊಂಡಿದ್ದರು. ಇದರಿಂದಾಗಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಿರ್ದೇಶನದಂತೆ, ಇಬ್ಬರ ವಿರುದ್ಧವೂ ಇಂಟರ್‌ಪೋಲ್ ಮೂಲಕ ‘ಲುಕ್‌ಔಟ್ ನೋಟಿಸ್’ ಜಾರಿಗೊಳಿಸಲಾಗಿತ್ತು. ಇದರ ಬೆನ್ನಲ್ಲೇ, ಸಿಂಗಾಪುರದಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ಯಾಮಕಾನು ಮಹಾಂತನನ್ನು ಮತ್ತು ಗುರುಗ್ರಾಮ್‌ನ ಅಪಾರ್ಟ್‌ಮೆಂಟ್‌ನಲ್ಲಿದ್ದ ಸಿದ್ಧಾರ್ಥ ಶರ್ಮಾನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಗುವಾಹಟಿಗೆ ಕರೆತರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ತನಿಖೆಯ ದಿಕ್ಕು ಮತ್ತು ಅನುಮಾನಗಳು
ಜುಬೀನ್ ಅವರ ಸಾವು ಸಹಜವಲ್ಲ, ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸದೆ ಸ್ಕೂಬಾ ಡೈವಿಂಗ್‌ಗೆ ಒತ್ತಾಯಿಸಲಾಗಿದೆಯೇ? ಅಥವಾ ಅವರ ಸುರಕ್ಷತೆಯ ಬಗ್ಗೆ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಲಾಗಿದೆಯೇ? ಎಂಬ ಪ್ರಶ್ನೆಗಳು ಇದೀಗ ತನಿಖೆಯ ಕೇಂದ್ರಬಿಂದುವಾಗಿವೆ. ಬಂಧಿತರಿಬ್ಬರೂ ಜುಬೀನ್ ಅವರ ಸಿಂಗಾಪುರ ಪ್ರವಾಸದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಹೀಗಾಗಿ, ಅವರ ವಿಚಾರಣೆಯಿಂದ ಸಾವಿನ ಹಿಂದಿನ ನಿಖರವಾದ ಕಾರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ. ಸಿಂಗಾಪುರ ಅಸ್ಸಾಂ ಅಸೋಸಿಯೇಷನ್‌ನ ಸದಸ್ಯರು ಮತ್ತು ಉತ್ಸವಕ್ಕೆ ತೆರಳಿದ್ದ ಇತರರಿಗೂ ಎಸ್‌ಐಟಿ ನೋಟಿಸ್ ನೀಡಿದ್ದು, ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.
ಸಂಗೀತ ಲೋಕದ ಧ್ರುವತಾರೆ
1972ರಲ್ಲಿ ಜನಿಸಿದ ಜುಬೀನ್ ಗಾರ್ಗ್, ಕೇವಲ ಗಾಯಕರಾಗಿರಲಿಲ್ಲ, ಅವರು ಅಸ್ಸಾಂನ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಮೂರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸಂಗೀತ ಪಯಣದಲ್ಲಿ, ಅಸ್ಸಾಮಿ, ಹಿಂದಿ, ಬಂಗಾಳಿ, ತಮಿಳು, ತೆಲುಗು ಸೇರಿದಂತೆ ಹತ್ತಾರು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದರು. ‘ಗ್ಯಾಂಗ್‌ಸ್ಟರ್’ ಚಿತ್ರದ ‘ಯಾ ಅಲಿ’ ಹಾಡು ಅವರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅವರ ಅಕಾಲಿಕ ಮರಣವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಜುಬೀನ್ ಅವರ ಸ್ಮರಣಾರ್ಥ ಅಸ್ಸಾಂ ಸರ್ಕಾರವು ಸ್ಮಾರಕ ನಿರ್ಮಾಣಕ್ಕೂ ಮುಂದಾಗಿದೆ.
ಪ್ರಕರಣದ ತನಿಖೆ ಮುಂದುವರೆದಿದ್ದು, ಬಂಧಿತರ ವಿಚಾರಣೆಯ ನಂತರ ಮತ್ತಷ್ಟು ಆಘಾತಕಾರಿ ಸತ್ಯಗಳು ಹೊರಬೀಳುವ ನಿರೀಕ್ಷೆಯಿದೆ. ತಮ್ಮ ನೆಚ್ಚಿನ ಗಾಯಕನ ಸಾವಿನ ನ್ಯಾಯಕ್ಕಾಗಿ ಅಸ್ಸಾಂ ಮತ್ತು ದೇಶದಾದ್ಯಂತ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.