ನವದೆಹಲಿ: ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ (52) ಅವರು ಶುಕ್ರವಾರ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಸಮಯದಲ್ಲಿ ನಿಧನರಾಗಿದ್ದು, ಅವರು ಲೈಫ್ ಜಾಕೆಟ್ ಧರಿಸದೇ ಈಜಾಡಲು ಹೋಗಿದ್ದಾಗ ಘಟನೆ ನಡೆದಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ದುರಂತ ಸಂಭವಿಸುವ ಸ್ವಲ್ಪ ಮೊದಲು ಅವರು ಲೈಫ್ ಜಾಕೆಟ್ ಧರಿಸಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶನಿವಾರ ನಡೆಯಬೇಕಿದ್ದ ‘ನಾರ್ತ್ ಈಸ್ಟ್ ಫೆಸ್ಟಿವಲ್‘ನಲ್ಲಿ ಪ್ರದರ್ಶನ ನೀಡಲು ಜುಬೀನ್ ಗರ್ಗ್ ಸಿಂಗಾಪುರದಲ್ಲಿದ್ದರು. ಸಮುದ್ರ ವಿಹಾರಕ್ಕೆ ತೆರಳಿದ್ದಾಗ ಅವರು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಭಾರತೀಯ ದೂತಾವಾಸ ಕಚೇರಿ ತಿಳಿಸಿತ್ತು. ಅಲ್ಲದೇ, ಲೈಫ್ ಜಾಕೆಟ್ ಧರಿಸದೇ ನೀರಿಗೆ ಹಾರಿದ್ದರಿಂದ ಈ ದುರಂತ ಸಂಭವಿಸಿದೆ ಎಂದೂ ಹೇಳಲಾಗಿತ್ತು.
ಆದರೆ, ದುರಂತಕ್ಕೂ ಮುನ್ನ ಜುಬೀನ್ ಲೈಫ್ ಜಾಕೆಟ್ ಸರಿಪಡಿಸಿಕೊಂಡು ಈಜಾಡಲು ಸಮುದ್ರಕ್ಕೆ ಹಾರುತ್ತಿರುವ ದೃಶ್ಯವನ್ನು ಹೊಂದಿರುವ ವಿಡಿಯೋವೊಂದು ಇದೀಗ ಹರಿದಾಡುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಣ್ಯರ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಜುಬೀನ್ ಗರ್ಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, “ಜನಪ್ರಿಯ ಗಾಯಕ ಜುಬೀನ್ ಗರ್ಗ್ ಅವರ ಹಠಾತ್ ನಿಧನದಿಂದ ಆಘಾತವಾಗಿದೆ. ಸಂಗೀತಕ್ಕೆ ಅವರ ಸಮೃದ್ಧ ಕೊಡುಗೆಗಾಗಿ ಅವರನ್ನು ಸದಾ ಸ್ಮರಿಸಲಾಗುತ್ತದೆ” ಎಂದು ಎಕ್ಸ್ (ಟ್ವೀಟರ್) ಖಾತೆಯಲ್ಲಿ ಬರೆದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, “ಇಂದು ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಜುಬೀನ್ ಅಸ್ಸಾಂಗೆ ಏನಾಗಿದ್ದರು ಎಂಬುದನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ. ಅವರು ತುಂಬಾ ಬೇಗ ನಮ್ಮನ್ನು ಅಗಲಿದ್ದಾರೆ” ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ, “ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಹೃದಯ ಒಡೆದುಹೋಗಿದೆ! ಜುಬೀನ್ ಗರ್ಗ್ ಸೃಷ್ಟಿಸಿದ ಶೂನ್ಯವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಸಂಗೀತ ಲೋಕಕ್ಕೆ ಕೊಡುಗೆ
ಜುಬೀನ್ ಗರ್ಗ್ ಅವರು ಅಸ್ಸಾಮಿ ಸಂಗೀತವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿಗೆ ಪಾತ್ರರಾಗಿದ್ದರು. 2006ರಲ್ಲಿ ಬಿಡುಗಡೆಯಾದ ‘ಗ್ಯಾಂಗ್‌ಸ್ಟರ್‘ ಚಿತ್ರದ ‘ಯಾ ಅಲಿ‘ ಹಾಡಿನ ಮೂಲಕ ಅವರು ದೇಶಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಈ ಹಾಡು ಅಂದಿನ ಬಾಲಿವುಡ್‌ನ ಅತ್ಯಂತ ಜನಪ್ರಿಯ ಟ್ರ್ಯಾಕ್‌ಗಳಲ್ಲಿ ಒಂದಾಗಿತ್ತು. ಕನ್ನಡ ಸೇರಿದಂತೆ 40ಕ್ಕೂ ಅಧಿಕ ಭಾಷೆಗಳಲ್ಲಿ ಅವರು ಹಾಡಿದ್ದರು.



















