ಬಕ್ಸಾ (ಅಸ್ಸಾಂ): ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರನ್ನು ಬುಧವಾರ ಹೊಸದಾಗಿ ನಿರ್ಮಿಸಲಾದ ಬಕ್ಸಾ ಜಿಲ್ಲಾ ಜೈಲಿಗೆ (ಮುಶಾಲ್ಪುರ್) ಕರೆದೊಯ್ಯುತ್ತಿದ್ದ ವೇಳೆ ಜುಬೀನ್ ಅಭಿಮಾನಿಗಳು ಜೈಲಿನ ಹೊರಗೆ ಭಾರೀ ಪ್ರತಿಭಟನೆ ನಡೆಸಿದ್ದಲ್ಲದೇ, ಆರೋಪಿಗಳ ಮೇಲೆ ಕಲ್ಲೆಸೆದ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಕೆಲವರು ಆವರಣಕ್ಕೆ ನುಗ್ಗಲು ಯತ್ನಿಸಿದ್ದರಿಂದ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಆರೋಪಿಗಳನ್ನು ಸೌಲಭ್ಯಗಳಿರುವ ಹೊಸ ಜೈಲಿಗೆ ಕಳುಹಿಸಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಜೈಲಿನ ಹೊರವಲಯದಲ್ಲಿ ತೀವ್ರ ಪ್ರತಿಭಟನೆ, ಘೋಷಣೆ, ಕೂಗಾಟಗಳು ನಡೆದಿವೆ.

ಕಾನೂನು ಪ್ರಕ್ರಿಯೆಯಂತೆ, ಕಾಮರೂಪ್ ಮುಖ್ಯ ನ್ಯಾಯಿಕ ದಂಡಾಧಿಕಾರಿ ಬುಧವಾರ ಐವರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಿ, ಅವರ ಸುರಕ್ಷತೆಯನ್ನು ಮನಗಂಡು ಕೈದಿಗಳ ಸಂಖ್ಯೆ ಕಡಿಮೆಯಿರುವ ಜೈಲಿಗೆ ಕಳುಹಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಅಧಿಕಾರಿಗಳು ಅವರನ್ನು ಎರಡು ತಿಂಗಳ ಹಿಂದೆ ಉದ್ಘಾಟನೆಯಾದ, ಇನ್ನೂ ಕೈದಿಗಳು ದಾಖಲಾಗದ ಬಕ್ಸಾ ಜೈಲು, ಮುಶಾಲ್ಪುರ್‌ಗೆ ಸ್ಥಳಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ಭಾರತ ಉತ್ಸವದ ಸಂಘಟಕ ಶ್ಯಾಮ್ಕಾನು ಮಹಾಂತಾ, ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ, ಗರ್ಗ್ ಅವರ ಸಹೋದರ ಹಾಗೂ ಪೊಲೀಸ್ ಅಧಿಕಾರಿ ಸಂದೀಪನ್ ಗರ್ಗ್ ಹಾಗೂ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳು ನಂದೇಶ್ವರ ಬೋರಾ ಮತ್ತು ಪ್ರಬೀಣ ಬೈಶ್ಯ ಈ ಪ್ರಕರಣದ ಬಂಧಿತರು. ಸಿಂಗಾಪೂರದಲ್ಲಿ ಕಳೆದ ತಿಂಗಳು ಸಂಭವಿಸಿದ ಜುಬೀನ್ ಗರ್ಗ್ ಅವರ ಸಾವಿಗೆ ಸಂಬಂಧಿಸಿದ ಇವರನ್ನು ಬಂಧಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಜೈಲು ಆವರಣ ಹಾಗೂ ಹೊರವಲಯದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಕಾವಲು ನಿಂತಿವೆ.