ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿಯು ಮಹತ್ವದ ಬದಲಾವಣೆಯೊಂದನ್ನು ಪ್ರಕಟಿಸಿದೆ.

ಬಾಂಗ್ಲಾದೇಶದ ಸ್ಟಾರ್ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕೆಕೆಆರ್ ಆಡಳಿತ ಮಂಡಳಿಯು, ಅವರ ಸ್ಥಾನಕ್ಕೆ ಜಿಂಬಾಬ್ವೆಯ ತಾರಾ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿಕೊಂಡಿದೆ. ಮಾರ್ಚ್ 13ರಂದು ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಮುಜರಬಾನಿ ಮಾರ್ಚ್ 17ರಂದು ಕೆಕೆಆರ್ ಪಡೆಯನ್ನು ಸೇರಿಕೊಳ್ಳಲಿದ್ದಾರೆ.

ಪಿಎಸ್‌ಎಲ್ ತೊರೆದು ಐಪಿಎಲ್‌ನತ್ತ ಮುಖ ಮಾಡಿದ ಮುಜರಬಾನಿ
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ 6 ಅಡಿ 8 ಇಂಚು ಎತ್ತರದ ಬ್ಲೆಸ್ಸಿಂಗ್ ಮುಜರಬಾನಿ, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. ಈ ಟೂರ್ನಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು. ವಿಶೇಷವೆಂದರೆ, ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಆಡಲು ಒಪ್ಪಂದ ಮಾಡಿಕೊಂಡಿದ್ದ ಅವರು, ಕೆಕೆಆರ್‌ನಿಂದ ಬುಲಾವ್ ಬಂದ ತಕ್ಷಣವೇ ಪಿಎಸ್‌ಎಲ್ ಟೂರ್ನಿಯಿಂದ ಹಿಂದೆ ಸರಿದು ಐಪಿಎಲ್ ಆಡಲು ಒಲವು ತೋರಿದ್ದಾರೆ.
ಪ್ರಸ್ತುತ ಕೆಕೆಆರ್ ತಂಡವು ವೇಗದ ಬೌಲರ್‌ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಪ್ರಮುಖ ವೇಗಿಗಳಾದ ಮತೀಶ ಪತಿರಣ ಹಾಗೂ ಹರ್ಷಿತ್ ರಾಣಾ ಗಾಯಗೊಂಡಿರುವುದು ತಂಡದ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮುಜರಬಾನಿ ಅವರ ಸೇರ್ಪಡೆಯಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ತಮ್ಮ ಅಸಾಧಾರಣ ಎತ್ತರದ ಲಾಭವನ್ನು ಪಡೆದು ಚೆಂಡನ್ನು ಅತ್ಯಂತ ಕರಾರುವಾಕ್ಕಾಗಿ ಬೌನ್ಸ್ ಮಾಡುವ ಹಾಗೂ ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಮುಜರಬಾನಿ ಹೊಂದಿದ್ದು, ಇದು ಕೋಲ್ಕತ್ತಾ ತಂಡಕ್ಕೆ ದೊಡ್ಡ ಮಟ್ಟದ ನೆರವಾಗಲಿದೆ.
9.20 ಕೋಟಿ ರೂ. ನೀಡಿ ಖರೀದಿಸಿದ್ದರೂ ಮುಸ್ತಾಫಿಜುರ್ ರೆಹಮಾನ್‌ರನ್ನು ಕೈಬಿಟ್ಟಿದ್ದೇಕೆ?
ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 9.20 ಕೋಟಿ ರೂಪಾಯಿಗಳ ಭಾರಿ ಮೊತ್ತವನ್ನು ನೀಡಿ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ಖರೀದಿಸಿತ್ತು. ಆದಾಗ್ಯೂ, ಅವರನ್ನು ದಿಢೀರನೆ ಬಿಡುಗಡೆ ಮಾಡಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ, ಕೆಲವು ರಾಜಕೀಯ ಹಾಗೂ ಧಾರ್ಮಿಕ ಸಂಘಟನೆಗಳು ಮುಸ್ತಾಫಿಜುರ್ ಅವರ ಐಪಿಎಲ್ ಭಾಗವಹಿಸುವಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಈ ವಿವಾದವು ತಾರಕಕ್ಕೇರುತ್ತಿದ್ದಂತೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮುಸ್ತಾಫಿಜುರ್ ಅವರನ್ನು ಕೈಬಿಡುವಂತೆ ಕೆಕೆಆರ್ ಫ್ರಾಂಚೈಸಿಗೆ ಅನಧಿಕೃತವಾಗಿ ಸೂಚನೆ ನೀಡಿತ್ತು ಎನ್ನಲಾಗಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಈ ಬೆಳವಣಿಗೆಗಳ ನಂತರ, ಐಪಿಎಲ್‌ನಿಂದ ಹೊರಬಿದ್ದ ಮುಸ್ತಾಫಿಜುರ್ ಇದೀಗ ಪಾಕಿಸ್ತಾನ್ ಸೂಪರ್ ಲೀಗ್‌ನ 11ನೇ ಆವೃತ್ತಿಯಲ್ಲಿ ಆಡಲು ಲಾಹೋರ್ ಖಲಂದರ್ಸ್ ತಂಡವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಹೆಚ್ಚಾಗುತ್ತಿದೆ ಪಿಎಸ್‌ಎಲ್ ಬಿಟ್ಟು ಐಪಿಎಲ್ ಆರಿಸಿಕೊಳ್ಳುವ ಟ್ರೆಂಡ್
ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ ಒಪ್ಪಂದವನ್ನು ಮುರಿದು ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ಆಕರ್ಷಿತರಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಎರಡು ವರ್ಷಗಳಲ್ಲಿ ಪಿಎಸ್‌ಎಲ್ ಕೈಬಿಟ್ಟ ಎರಡನೇ ಪ್ರಮುಖ ಘಟನೆ ಇದಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಕೂಡ ಇದೇ ರೀತಿಯ ನಿರ್ಧಾರ ಕೈಗೊಂಡಿದ್ದರು. 2025ರ ಪಿಎಸ್‌ಎಲ್ ಡ್ರಾಫ್ಟ್‌ನಲ್ಲಿ ಪೇಶಾವರ್ ಝಲ್ಮಿ ತಂಡವು ಕಾರ್ಬಿನ್ ಬಾಷ್ ಅವರನ್ನು ‘ಡೈಮಂಡ್ ಪಿಕ್’ ಆಗಿ ಆಯ್ಕೆ ಮಾಡಿತ್ತು. ಲಿಜಾಡ್ ವಿಲಿಯಮ್ಸ್ ಅವರ ಗಾಯದ ಬದಲಿಯಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಆದರೆ, 30 ವರ್ಷದ ಬಾಷ್ ಪಿಎಸ್‌ಎಲ್ ಒಪ್ಪಂದವನ್ನು ಬದಿಗೊತ್ತಿ ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದ್ದರು. ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಫ್ರಾಂಚೈಸಿ ಲೀಗ್‌ನಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಕ್ಕಾಗಿ ಬಾಷ್‌ಗೆ ಒಂದು ವರ್ಷದ ನಿಷೇಧವನ್ನು ಹೇರಿತ್ತು. ಇದೀಗ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಕೂಡ ಪಿಎಸ್‌ಎಲ್ ಬದಲಾಗಿ ಐಪಿಎಲ್ ಆಯ್ಕೆ ಮಾಡಿಕೊಂಡಿರುವುದು, ಜಾಗತಿಕ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಐಪಿಎಲ್ ಹೊಂದಿರುವ ಅತಿ ದೊಡ್ಡ ಪ್ರಭಾವವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಇದನ್ನೂ ಓದಿ : IPL 2026 : ಸತತ ಎರಡನೇ ಬಾರಿ ಟ್ರೋಫಿ ಗೆಲ್ಲಲು ವಿರಾಟ್ ಕೊಹ್ಲಿ ಹಪಾಹಪಿ; ಇರ್ಫಾನ್ ಪಠಾಣ್



















