ಹೈದರಾಬಾದ್ : ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಡಳಿತ ಮಂಡಳಿಯ ನಿರ್ಧಾರವೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ತಂಡದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ನಾಯಕತ್ವದ ರೇಸ್‌ನಿಂದ ಹೊರಗಿಟ್ಟು, ಇಶಾನ್ ಕಿಶನ್ ಅವರಿಗೆ ಹಂಗಾಮಿ ನಾಯಕ ಪಟ್ಟ ನೀಡಿರುವುದು ಟೀಮ್ ಇಂಡಿಯಾದ ಮಾಜಿ ದಿಗಜ ಆಟಗಾರ ಯುವರಾಜ್ ಸಿಂಗ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಿಲ್ಲದ ಕಾರಣ, ಫ್ರಾಂಚೈಸಿಯು ಕಿಶನ್ ಅವರಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. ಈ ನಿರ್ಧಾರವು ಆಟಗಾರರ ಮನೋಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಯುವರಾಜ್ ಎಚ್ಚರಿಸಿದ್ದಾರೆ.
ಅಭಿಷೇಕ್ ಶರ್ಮಾ ಕಳೆದ ಏಳು ವರ್ಷಗಳಿಂದ ಹೈದರಾಬಾದ್ ಫ್ರಾಂಚೈಸಿಗಾಗಿ ತಮ್ಮ ಬೆವರು ಸುರಿಸಿದ್ದಾರೆ ಮತ್ತು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ನಿಷ್ಠಾವಂತ ಆಟಗಾರನನ್ನು ಬಿಟ್ಟು ಬೇರೊಬ್ಬರಿಗೆ ನಾಯಕತ್ವ ನೀಡುವುದು ಆಟಗಾರನಿಗೆ ತಂಡದ ಮೇಲಿರುವ ಬಾಂಧವ್ಯವನ್ನು ಕುಂದಿಸಬಹುದು ಎಂಬುದು ಯುವರಾಜ್ ಅವರ ವಾದ. ಈ ಬಗ್ಗೆ ಕಟುವಾಗಿ ಮಾತನಾಡಿರುವ ಅವರು, “ನನಗೆ ಇಶಾನ್ ಕಿಶನ್ ಎಂದರೆ ತುಂಬಾ ಇಷ್ಟ, ಅವರ ಬೆಳವಣಿಗೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಆದರೆ ಏಳು ವರ್ಷಗಳಿಂದ ತಂಡಕ್ಕಾಗಿ ದುಡಿಯುತ್ತಿರುವ, ರಾಜ್ಯ ತಂಡವನ್ನೂ ಮುನ್ನಡೆಸುತ್ತಿರುವ ಆಟಗಾರನಿಗೆ ನಾಯಕತ್ವ ನೀಡದೆ ಉಪನಾಯಕನನ್ನಾಗಿ ಮಾಡುವುದು ಎಷ್ಟು ಸರಿ? ಇದು ಖಂಡಿತವಾಗಿಯೂ ಆಟಗಾರನ ಉತ್ಸಾಹಕ್ಕೆ ತಣ್ಣೀರೆರಚಿದಂತೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಪ್ರದರ್ಶನ ನೀಡಲು ಸಲಹೆ
ತಮ್ಮ ಶಿಷ್ಯನಂತಿರುವ ಅಭಿಷೇಕ್ ಶರ್ಮಾಗೆ ಧೈರ್ಯ ತುಂಬಿರುವ ಯುವರಾಜ್ ಸಿಂಗ್, ಈ ಅಸಮಾಧಾನವನ್ನು ಮರೆತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಸಲಹೆ ನೀಡಿದ್ದಾರೆ. “ನಾನು ಅಭಿಷೇಕ್ ಜೊತೆ ಮಾತನಾಡಿದ್ದೇನೆ. ಇಂತಹ ನಿರ್ಧಾರಗಳು ಕ್ರೀಡೆಯಲ್ಲಿ ಸಾಮಾನ್ಯ. ನೀನು ಈಗಿನ ನಾಯಕನಿಗೆ ಬೆಂಬಲ ನೀಡು ಮತ್ತು ನಿನ್ನ ಆಟದ ಮೂಲಕವೇ ಎಲ್ಲರಿಗೂ ಉತ್ತರ ಕೊಡು. ಮನಸ್ಸಿಗೆ ನೋವಾಗಿದ್ದರೆ ಅದನ್ನು ಪ್ರೇರಣೆಯನ್ನಾಗಿ ಬಳಸಿಕೊಂಡು ಅಬ್ಬರಿಸು ಎಂದು ಹೇಳಿದ್ದೇನೆ,” ಎಂದು ಅವರು ಬಹಿರಂಗಪಡಿಸಿದ್ದಾರೆ. ಯುವರಾಜ್ ಅವರ ಈ ಹೇಳಿಕೆಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್‌ನ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ – ಕೇಸ್ ದಾಖಲು



















