ಹೈದರಾಬಾದ್ : ಹೈದರಾಬಾದ್‌ನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿನಿ ಹಾಗೂ ಅರೆಕಾಲಿಕ ಯೂಟ್ಯೂಬರ್ ಬೋನು ಕೋಮಲಿ ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಕುವೈತ್‌ನಲ್ಲಿರುವ ತಮ್ಮ ತಾಯಿಗೆ “ಅಮ್ಮಾ, ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ” ಎಂದು ಸಂದೇಶ ಕಳುಹಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವರಾದ ಕೋಮಲಿ, ಹೈದರಾಬಾದ್‌ನ ಖಾಸಗಿ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದರು. ಕಳೆದ 11 ತಿಂಗಳಿನಿಂದ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸವಿದ್ದರು. ಸೋಮವಾರ ಮುಂಜಾನೆ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವ ತಾಯಿ ಬಿ. ಸತ್ಯ ವರಲಕ್ಷ್ಮಿ ಅವರಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದ ಕೋಮಲಿ, “ಅಮ್ಮ ಐ ಲವ್ ಯೂ ಸೋ ಮಚ್, ತಮ್ಮನನ್ನು ಚೆನ್ನಾಗಿ ನೋಡಿಕೋ” ಎಂದು ತಿಳಿಸಿದ್ದರು. ತದನಂತರ ಮಗಳ ಫೋನ್ ಸ್ವಿಚ್ ಆಫ್ ಬಂದಿದ್ದರಿಂದ ಆತಂಕಗೊಂಡ ತಾಯಿ, ಹೈದರಾಬಾದ್‌ನಲ್ಲಿದ್ದ ಮಗಳ ಗೆಳೆಯನಿಗೆ ಮಾಹಿತಿ ನೀಡಿದ್ದಾರೆ.
ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಗೆಳೆಯ ಮನೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕೂಗಿದರೂ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುರಿದು ಒಳಹೋಗಿ ನೋಡಿದಾಗ, ಕೋಮಲಿ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಪಕ್ಕದಲ್ಲಿ ಏಣಿ ಹಾಗೂ ಸೀರೆ ಕಂಡುಬಂದಿದೆ.
ಮುರಿದುಬಿದ್ದ ಪ್ರೇಮ ಸಂಬಂಧವೇ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೋಮಲಿ ಕಳೆದ ಮೂರು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಸಹ-ಯೂಟ್ಯೂಬರ್ ಆಗಿದ್ದ 27 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಇತ್ತೀಚೆಗೆ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ಸಂಬಂಧ ಕಡಿದುಹೋಗಿತ್ತು. ಇದರಿಂದ ಕೋಮಲಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಗಮನಾರ್ಹ ವಿಷಯವೆವೆಂದರೆ, ಆರು ತಿಂಗಳ ಹಿಂದೆಯೂ ಅವರು ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಕೋಮಲಿ ಅವರ ಫೋನ್ ದಾಖಲೆಗಳು, ಸಂದೇಶಗಳು ಹಾಗೂ ಗೆಳೆಯರ ಹೇಳಿಕೆಗಳನ್ನು ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ IIMBಯಲ್ಲಿ ನೇಮಕಾತಿ | ವರ್ಷಕ್ಕೆ 11 ಲಕ್ಷ ರೂ. ಭರ್ಜರಿ ಪ್ಯಾಕೇಜ್



















