ಬಹ್ರೈಚ್: ತಾವು ಈ ಹಿಂದೆ ‘ಲವ್ ಜಿಹಾದ್’ ಶಂಕಿತ ಪ್ರಕರಣವನ್ನು ಪೊಲೀಸರಿಗೆ ವರದಿ ಮಾಡಿದ್ದಕ್ಕೆ, ತಮ್ಮನ್ನು ಅಪಹರಿಸಿ, ಬಟ್ಟೆ ಬಿಚ್ಚಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಇಬ್ಬರು ಹಿಂದೂ ಯುವಕರು ಗಂಭೀರ ಆರೋಪ ಮಾಡಿದ್ದಾರೆ.
ಜುಲೈ 23ರಂದು ನಡೆದ ಈ ಘಟನೆ, ಸಂತ್ರಸ್ತ ಯುವಕರಲ್ಲಿ ಒಬ್ಬರಾದ ಚಂದನ್ ಮೌರ್ಯ ಅವರು ರಾಮಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬೆಳಕಿಗೆ ಬಂದಿದೆ.
ಚಂದನ್ ಮೌರ್ಯ, ಅವರ ಸೋದರಸಂಬಂಧಿ ಮೋಹಿತ್ ಮತ್ತು ಸ್ನೇಹಿತ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಶಹಾಬುದ್ದೀನ್ ಮತ್ತು ಇತರೆ ಇಬ್ಬರು ಅವರನ್ನು ಅಡ್ಡಗಟ್ಟಿದ್ದಾರೆ. ನಂತರ, ಅನಸ್ ಮತ್ತು ಜೀಶಾನ್ ಎಂಬಿಬ್ಬರು ಸಹ ಅವರೊಂದಿಗೆ ಸೇರಿಕೊಂಡರು. ಚಂದನ್ ಮತ್ತು ಮೋಹಿತ್ ಅವರನ್ನು ವಾಹನಕ್ಕೆ ಹತ್ತಿಸಿಕೊಂಡು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ತಮ್ಮ ಬಟ್ಟೆಗಳನ್ನು ಬಿಚ್ಚಿಸಿ, ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಥಳಿಸಿದ್ದಾರೆ. ನೀರಡಿಕೆಯಾದಾಗ ನೀರು ಕೇಳಿದರೆ, ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ಬಂದೂಕಿನ ತುದಿಯಲ್ಲಿ “ಇಸ್ಲಾಂ ಜಿಂದಾಬಾದ್” ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗುಂಪುಗಳ ನಡುವಿನ ಹಳೆಯ ವೈಯಕ್ತಿಕ ದ್ವೇಷವೇ ಈ ಹಲ್ಲೆಗೆ ಕಾರಣ ಎಂದು ತಿಳಿದುಬಂದಿದೆ. “ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶಹಾಬುದ್ದೀನ್, ಅನಸ್ ಮತ್ತು ಜೀಶಾನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಬಳಸಲಾಗಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ಹೆಚ್ಚುವರಿ ಎಸ್ಪಿ ದುರ್ಗಾ ಪ್ರಸಾದ್ ತಿವಾರಿ ತಿಳಿಸಿದ್ದಾರೆ.
ಧಾರ್ಮಿಕ ಘೋಷಣೆಗಳನ್ನು ಕೂಗಿಸಲಾಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, “ಈ ಆರೋಪಗಳಿಗೆ ಇನ್ನೂ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಇದು ಮೂಲ ದೂರಿನಲ್ಲಿ ಇರಲಿಲ್ಲ, ನಂತರ ಸೇರಿಸಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ,” ಎಂದಿದ್ದಾರೆ.
ಆರೋಪಿಗಳು “ಬಾಬಾ ಗುರುಪ್” (Baba Guruup) ಎಂಬ ಇನ್‌ಸ್ಟಾಗ್ರಾಮ್ ಗುಂಪಿನ ಭಾಗವಾಗಿದ್ದು, ನಕಲಿ ಹಿಂದೂ ಗುರುತನ್ನು ಬಳಸಿ ವಾಟ್ಸ್ ಆ್ಯಪ್ ಮೂಲಕ ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸುತ್ತಿದ್ದರು ಎಂದು ಚಂದನ್ ಆರೋಪಿಸಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಈ ಗುಂಪಿನ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ, “ಪೊಲೀಸರು ಕ್ರಮ ಕೈಗೊಳ್ಳುವ ಬದಲು ನನ್ನ ಫೋನ್‌ನಲ್ಲಿದ್ದ ಎಲ್ಲಾ ಸಾಕ್ಷ್ಯಗಳನ್ನು ಅಳಿಸಿ, ರಾಜಿ ಸಂಧಾನಕ್ಕೆ ಯತ್ನಿಸಿದ್ದರು” ಎಂದು ಚಂದನ್ ಆರೋಪಿಸಿದ್ದಾರೆ. ಅಂದಿನಿಂದ ದ್ವೇಷ ಸಾಧಿಸುತ್ತಿದ್ದ ಆರೋಪಿಗಳು, ತಮ್ಮನ್ನು ನೇಪಾಳಕ್ಕೆ ಕರೆದೊಯ್ದು ಕೊಲೆ ಮಾಡಲು ಯೋಜಿಸಿದ್ದರು ಎಂದು ಅವರು ಹೇಳಿದ್ದಾರೆ.
ಈ ಹೊಸ ಆರೋಪಗಳು ಸಹ ಆರಂಭಿಕ ಎಫ್‌ಐಆರ್‌ನಲ್ಲಿ ಇರಲಿಲ್ಲ ಮತ್ತು ವಿಸ್ತೃತ ತನಿಖೆಯ ಭಾಗವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



















